ಜಾತಿ ಸಮೀಕರಣದಲ್ಲೂ ಸೈ, ಅನುಭವದಲ್ಲೂ ಜೈ, ಡಿ.ಕೆ.ಶಿವಕುಮಾರ ಪದಗ್ರಹಣಕ್ಕೆ ಸಕಲ ಸಿದ್ಧತೆ

0
17
ಉತ್ತರ ಕರ್ನಾಟಕದಲ್ಲಿ ಪ್ರಬಲ ತಂಡ ಸನ್ನದ್ಧ
 ಜಾತಿ ಸಮೀಕರಣದಲ್ಲೂ ಸೈ, ಅನುಭವದಲ್ಲೂ ಜೈ
ಬೆಳಗಾವಿ – ಡಿ.ಕೆ.ಶಿವಕುಮಾರ ನೇತೃತ್ವದ ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಗುರುವಾರ ಅಧಿಕಾರ ಸ್ವೀಕರಿಸುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ.
ಡಿ.ಕೆ.ಶಿವಕುಮಾರ ತಂಡ ವಿನೂತನ ರೀತಿಯಲ್ಲಿ ಅಧಿಕಾರ ಗ್ರಹಣ ಮಾಡುತ್ತಿದೆ. ಕಾಂಗ್ರೆಸ್ ಪಡೆಯನ್ನು  ಮತ್ತೊಮ್ಮೆ ಬಲಿಷ್ಠವಾಗಿ ಕಟ್ಟು ರೀತಿಯಲ್ಲಿ ತಯಾರಿ ನಡೆದಿದೆ. ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಮತ್ತು ಸಲೀಮ್ ಅಹ್ಮದ್ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
ಈ ನೂತನ ಕಾಂಗ್ರೆಸ್ ಸಮಿತಿಗೆ ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುವ ಈ ಭಾಗದಲ್ಲಿ ಸತೀಶ್ ಜಾರಕಿಹೊಳಿ ಜೊತೆಗೆ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೆಗಲು ಕೊಟ್ಟಿದ್ದಾರೆ. ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು, ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ತರಲು ನಿರಂತರ ಶ್ರಮಿಸುತ್ತಿದ್ದಾರೆ. ಇವರೊಂದಿಗೆ ಎಂ.ಬಿ.ಪಾಟೀಲ ಸೇರಿದಂತೆ ಹಲವಾರು ನಾಯಕರು ಮಾರ್ಗದರ್ಶಕರಾಗಿ ಬೆನ್ನಿಗಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದ ನಾಯಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಅತ್ಯಂತ ತಾಳ್ಮೆ ಮತ್ತು ಚಾಣಾಕ್ಷತೆಯಿಂದ ಪಕ್ಷದ ಕೆಲಸ ಮಾಡುತ್ತಿರುವ ಲಕ್ಷ್ಮಿ ಹೆಬ್ಬಾಳಕರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಮತ್ತು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದಾಗ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಕೆಲಸ ಮಾಡಿ ತೋರಿಸಿದ್ದಾರೆ.
ಇದೀಗ ಡಿ.ಕೆ.ಶಿವಕುಮಾರ ನೇತೃತ್ವದ ತಂಡಕ್ಕೆ ಸತೀಶ್ ಜಾರಕಿಹೊಳಿ ಕಾರ್ಯಾಧ್ಯಕ್ಷರಾಗಿ ಸೇರಿಕೊಂಡಿದ್ದಾರೆ. ಅವರು ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಜೊತೆಗೆ ಲಿಂಗಾಯತ ಸಮುದಾಯದವರಾಗಿ, ಇಡೀ ಸಮಾಜ ಜಾತೀಯತೆಯನ್ನು ಮೀರಿ ಒಪ್ಪುವಂತಹ ನಾಯಕಿಯಾಗಿ ಲಕ್ಷ್ಮಿ ಹೆಬ್ಬಾಳಕರ್ ಬೆಳೆಯುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ವಿಶೇಷ ಸ್ಥಾನವಿದೆ. ಅವರ ಸಂಘಟನಾ ಸಾಮರ್ಥ್ಯ, ವಾಕ್ ಚಾತುರ್ಯದಿಂದಾಗಿ ಪಕ್ಷ ಮುಂಬರುವ ದಿನಗಳಲ್ಲಿ ಅವರನ್ನು ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇಡೀ ಉತ್ತರ ಕರ್ನಾಟಕವನ್ನು ಸುತ್ತಿ ಪಕ್ಷ ಕಟ್ಟುವ ಸಾಮರ್ಥ್ಯ ಮತ್ತು ಉತ್ಸಾಹ ಲಕ್ಷ್ಮಿ ಹೆಬ್ಬಾಳಕರ್ ಅವರಲ್ಲಿದೆ. ಅವರ ಬೆನ್ನಿಗೆ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಯಾವುದೇ ಗುರಿ ಹಾಕಿಕೊಂಡರೆ ಸಾಧಿಸುವ ಛಲವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆದ್ದ ರೀತಿಯೇ ಇದಕ್ಕೆ ಸಾಕ್ಷಿಯಾಗಿದೆ.
ಒಟ್ಟಾರೆ, ರಾಜ್ಯದಲ್ಲಿ ಹೊಸ ನಾಯಕತ್ವ ಪಕ್ಷ ಕಟ್ಟಲು ಸಜ್ಜಾಗಿರುವಂತೆಯೇ ಉತ್ತರ ಕರ್ನಾಟಕದಲ್ಲೂ ಪಕ್ಷವನ್ನು ಮತ್ತೊಮ್ಮೆ ದಿಗ್ವಿಜಯದತ್ತ ಕೊಂಡೊಯ್ಯಲು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದ ತಂಡ ಸನ್ನದ್ಧವಾಗಿದೆ.
loading...