ನಾನು ಹೋಂ ಕ್ವಾರೆಂಟೇನ್ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

0
7

ಮೈಸೂರು:- ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೋಂ ಕ್ವಾರೆಂಟೇನ್ ಗೊಳಪಟ್ಟಿದ್ದಾರೆ ಎಂಬ ಸುದ್ದಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ವಿಶ್ರಾಂತಿಗಾಗಿ ತಾವು ಮೈಸೂರಿಗೆ ಬಂದಿದ್ದೇನೆಯೇ ಹೊರತು. ಹೋಂ ಕ್ವಾರಂಟೇನ್ ಗೆ ಅಲ್ಲ, ಮತ್ತೆ ಇಂದೇ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ವಿಶ್ರಾಂತಿಗಾಗಿ ಮೈಸೂರಿನ ತೋಟಕ್ಕೆ ಬಂದಿದ್ದನ್ನೇ ಕೆಲವರು ಹೋಂ ಕ್ವಾರೆಂಟೇನ್ ಸಿದ್ದರಾಮಯ್ಯಗೆ ಭಯ ಎಂದು ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ. ಹೀಗಾಗಿ ಇಂದೇ ಬೆಂಗಳೂರಿಗೆ ಹಿಂದಿರುಗುತ್ತಿರುವುದಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಬೇಕು. ಕೊರೊನಾ ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಕೊರೊನಾ ಸಾಮೂದಾಯಿಕವಾಗಿ ಹರಡುತ್ತಿದೆ. ಈಗ ಲಾಕ್ ಡೌನ್ ಮಾಡುವ ಅವಶ್ಯಕತೆಯಿದೆ. ಬೆಂಗಳೂರಿನಲ್ಲಿ ಕಾಲ ಮಿಂಚಿಹೋಗಿದ್ದು, ಕೊರೊನಾ ದೊಡ್ಡಮಟ್ಟದಲ್ಲಿ ಸ್ಫೋಟವಾಗುತ್ತಿದೆ. ಬೆಂಗಳೂರಿನ ಜನ ಭಯಭೀತರಾಗಿ ಬೆಂಗಳೂರನ್ನೇ ಬಿಡುತ್ತಿದ್ದಾರೆ. ಸರ್ಕಾರ ಜನರಿಗೆ ವಿಶ್ವಾಸ ತುಂಬುವ ಕೆಲಸವನ್ನೂ ಮಾಡಲಿಲ್ಲ. ಊರು ಬಿಡುತ್ತಿರುವವರಿಗೆ ಊಟ, ಕೆಲಸ ಮತ್ತು ಹಣ ನೀಡಬೇಕಿತ್ತು. ಆದರೆ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಇದನ್ನು ಮಾಡಲಿಲ್ಲ. ಬದುಕಿಗಾಗಿ ಜನರು ಬೆಂಗಳೂರು ಬಿಡುತ್ತಿದ್ದಾರೆ ಎಂದರು.ಪ್ರಧಾನಿ ಮೋದಿ ಅಕಾಲದಲ್ಲಿ ಲಾಕ್ ಡೌನ್ ಮಾಡಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಭಾರತದಲ್ಲಿ ಮಾರ್ಚ್ 24ರಂದು 536 ಜನರಿಗೆ ಮಾತ್ರ ಸೋಂಕು ಇತ್ತು. ಹತ್ತು ಜನ ಮಾತ್ರ ಮೃತಪಟ್ಟಿದ್ದರು. ಈಗ 7 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ಬಂದಿದೆ. 20 ಸಾವಿರ ಜನರು ಸಾವನ್ನಪ್ಪಿದ್ದಾರೆ. ಲಾಕ್‌ ಡೌನ್ ಆದ ನಂತರ ಇವೆಲ್ಲಾ ಆಗಿವೆ. ಲಾಕ್ ಡೌನ್ ಮುಗಿದ ಮೇಲೆ ಸೋಂಕು ಹೆಚ್ಚಾಗಿದೆ. ಲಾಕ್‌ ಡೌನ್‌ನಿಂದ ಏನು ಪ್ರಯೋಜನವಾಗಿದೆ ? ರಾಜ್ಯ ಸರ್ಕಾರ ಸಹ ಜನರ ನೆರವಿಗೆ ಧಾವಿಸಲಿಲ್ಲ ಎಂದರು.

ಲಾಕ್ ಡೌನ್ ಈಗ ಅವಶ್ಯಕತೆ ಇತ್ತು. ಮೂರ್ನಾಲ್ಕು ತಿಂಗಳು ಮಾಡಬೇಕಾಗಿತ್ತು. ಆದರೆ ಅಕಾಲಿಕವಾಗಿ ಮಾಡಲಾಗಿದೆ. ಈಗ ಆರ್ಥಿಕತೆಯ ನೆಪ ಹೇಳುತ್ತಿದ್ದಾರೆ. ಸಂಬಳ ನೀಡಲು ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ದಿನ 1000ಕ್ಕೂ ಅಧಿಕ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಡಿಮೆ ಪರೀಕ್ಷೆ ನಡೆಸಲಾಗುತ್ತಿದೆ. ಅಮೆರಿಕದಲ್ಲಿ 10 ಲಕ್ಷ ಜನರ ಪೈಕಿ 1 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ನಮ್ಮಲ್ಲಿ 1 ಲಕ್ಷ ಜನರಲ್ಲಿ 12-13 ಸಾವಿರ ಜನರಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ಹೆಚ್ಚು ಮಾಡಿದರೆ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದರು.

ಸರ್ಕಾರದಲ್ಲಿ ಪಾರದರ್ಶಕತೆ ಎನ್ನುವುದೇ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮಾಡಿರುವ ಖರ್ಚುವೆಚ್ಚದ ಬಗ್ಗೆ ಲೆಕ್ಕ ಕೊಡಬೇಕು. ಕೊಡದಿದ್ದರೆ ಬಿಡುವುದಿಲ್ಲ. ಲೆಕ್ಕಗಳನ್ನು ಸರ್ಕಾರ ಸಾರ್ವಜನಿಕರ ಮುಂದೆ ಇಡಬೇಕು. ಅಧಿಕಾರಿಗಳ ಮೂಲಕ ತಮಗೆ ಮುಖ್ಯಮಂತ್ರಿಗಳು ದಾಖಲೆ ಕಳುಹಿಸಲಿ. ತಾವೇ ಖುದ್ದು ಲೆಕ್ಕವನ್ನು ಪರಿಶೀಲಿಸುತ್ತೇನೆ. ಸರ್ಕಾರ ನಿಜಕ್ಕೂ ಪಾರದರ್ಶಕವಾಗಿದ್ದರೆ ತಮಗೆ ಮಾಹಿತಿ ದಾಖಲೆ ಸಲ್ಲಿಸಬೇಕು. ಇದನ್ನು ವಿಪಕ್ಷ ಕಾಂಗ್ರೆಸ್ ಇಲ್ಲಿಗೆ ಬಿಡದೇ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದರು.
ಸರ್ಕಾರ ಪ್ರಾಮಾಣಿಕರಾಗಿದ್ದರೆ ಅವರಿಗೆ ಭಯವೇಕೆ ? ದಾಖಲೆ ಸಾರ್ವಜನಿಕರ ಮುಂದೆ ಇಡಲಿ, ತನಿಖೆಗೆ ಸದನ ಸಮಿತಿ ರಚಿಸಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಜೆಡಿಎಸ್‌ ಜೊತೆ ಮೈತ್ರಿ ಬೇಡ ಎಂದು ದಿನೇಶ್ ಗುಂಡೂರಾವ್ ಇತ್ತೀಚೆಗೆ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದು ತಾವೂ ಹೇಳಿದ್ದೆ. ಆಗ ತಮ್ಮದು ಒಂಟಿಧ್ವನಿಯಾಗಿತ್ತು. ಮೈತ್ರಿ ಇಲ್ಲದಿದ್ದರೆ ಕಾಂಗ್ರೆಸ್ 7-8 ಸ್ಥಾನಗಳು ಗೆಲ್ಲುತ್ತಿತ್ತು. ಜೆಡಿಎಸ್ ಮೈತ್ರಿಯಿಂದಾಗಿಯೇ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಪುರುಚ್ಚರಿಸಿದರು.

ಎಲ್‌ಕೆಜಿಯಿಂದಲೇ ಆನ್‌ಲೈನ್ ಶಿಕ್ಷಣಕ್ಕೆ ಚಿಂತನೆ ವಿಚಾರ‌ದ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ
ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದರು.
ಬಹಳ ತಜ್ಞರು ಆನ್ ಲೈನ್ ಶಿಕ್ಷಣಕ್ಕೂ ವಿರೋಧ ಮಾಡಿಲ್ಲ. ಆದರೆ ಇದರಿಂದ ವಿದ್ಯಾರ್ಥಿಗಳ ಮನೋವಿಕಾಸ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ‌ ಎಂದಷ್ಟೇ ಹೇಳಿದ್ದಾರೆ.

loading...