ಏಕದಿನ ಪಂದ್ಯ: ಇಂಗ್ಲೆಂಡ್ ಮುಡಿಗೆ ಸರಣಿ

0
16

ಸೌತಾಂಪ್ಟನ್:- ಅನುಭವಿ ವಿಕೆಟ್ ಕೀಪರ್ ಜಾನಿ ಬೇರ್ ಸ್ಟೋ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕು ವಿಕೆಟ್ ಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ಐರ್ಲೆಂಡ್ ಮೊದಲು ಬ್ಯಾಟ್ ಮಾಡಿ 50 ಓವರ್ ಗಳಲ್ಲಿ 9 ವಿಕೆಟ್ ಗೆ 212 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 32.3 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 216 ರನ್ ಸೇರಿಸಿ ಗೆಲುವು ಸಾಧಿಸಿ, ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಇಂಗ್ಲೆಂಡ್ ಸರಣಿಯನ್ನು ವಶಕ್ಕೆ ಪಡೆಯಿತು.

ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಭರ್ಜರಿ ಆರಂಭ ಪಡೆಯುವಲ್ಲಿ ವಿಫಲವಾಯಿತು. ಐರ್ಲೆಂಡ್ ಮೊದಲ ಆರು ವಿಕೆಟ್ ಗಳನ್ನು 96 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಏಳನೇ ವಿಕೆಟ್ ಗೆ ಕರ್ಟಿಸ್ ಕ್ಯಾಂಪರ್- ಸಿಮಿ ಸಿಂಗ್ (25) ಜೋಡಿ ತಂಡಕ್ಕೆ ಅರ್ಧಶತಕದ ಜೊತೆಯಾಟವನ್ನು ನೀಡಿತು.
ಇನ್ನು ಎಂಟನೇ ವಿಕೆಟ್ ಗೆ ಕರ್ಟಿಸ್-ಆಂಡಿ ಮೆಕ್‌ಬ್ರೈನ್ ಜೋಡಿ ತಂಡದ ಮೊತ್ತವನ್ನು 200 ಗಡಿ ದಾಟುವಂತೆ ಮಾಡಿದರು. ಕರ್ಟಿಸ್ 8 ಬೌಂಡರಿ ನೆರವಿನಿಂದ 68 ಸೇರಿಸಿ ಅಬ್ಬರಿಸಿದರು.
ಐರ್ಲೆಂಡ್ ಪರ ಲಾರ್ಕಾನ್ ಟಕರ್ 21, ಹ್ಯಾರಿ ಟೆಕ್ಟರ್ 28 ರನ್ ಬಾರಿಸಿದರು. ಇಂಗ್ಲೆಂಡ್ ಪರ ಆದೀಲ್ ರಶೀದ್ 3, ಡೇವಿಡ್ ವಿಲ್ಲಿ ಹಾಗೂ ಸಾಕಿಬ್ ಮೊಹಮ್ಮದ್ ತಲಾ ಎರಡು ವಿಕೆಟ್ ಕಬಳಿಸಿದರು.

ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಜೇಸನ್ ರಾಯ್ ಸೊನ್ನೆ ಸುತ್ತಿದ್ದರು. ಎರಡನೇ ವಿಕೆಟ್ ಗೆ ಬೇರ್ ಸ್ಟೋ ಹಾಗೂ ಜೇಮ್ಸ್ ವಿನ್ಸ್ 71 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು.

ಅನುಭವಿ ಆಟಗಾರ ಜಾನಿ ಬೇರ್ ಸ್ಟೋ 41 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ಸೇರಿದಂತೆ 82 ಸಿಡಿಸಿದರು.

ಇಂಗ್ಲೆಂಡ್ ತಂಡ ಆರು ವಿಕೆಟ್ 137 ರನ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಯಾಮ್ ಬಿಲ್ಲಿಂಗ್ಸ್ (ಅಜೇಯ 46) ಹಾಗೂ ಡೇವಿಡ್ ವಿಲ್ಲಿ (ಅಜೇಯ 47) ಜೋಡಿ ತಂಡವನ್ನು ಗೆಲುವಿನ ದಡ ದಾಟಿಸಿತು.

ಐರ್ಲೆಂಡ್ ಪರ ಜೋಶುವಾ ಲಿಟಲ್ 3, ಕರ್ಟಿಸ್ ಕ್ಯಾಂಪರ್ 2 ವಿಕೆಟ್ ಕಬಳಿಸಿದರು.

loading...