ಆಸ್ಟ್ರೇಲಿಯಾಗೆ 19 ರನ್ ಗೆಲುವು

0
10

ಮ್ಯಾಂಚೆಸ್ಟರ್:-ಜೋಸ್ ಹೇಜಲ್ ವುಡ್ ಮತ್ತು ಆ್ಯಡಂ ಝಂಪಾ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಏಕದಿನ ಪಂದ್ಯದಲ್ಲಿ 19 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಶುಕ್ರವಾರ ತಡರಾತ್ರಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿತು. ಬಳಿಕ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ಗೆ 275 ರನ್ ಗಳಿಸಲಷ್ಟೇ ಶಕ್ತಗೊಂಡಿತು. ಇಂಗ್ಲೆಂಡ್ ಪರ ಜಾನಿ ಬೈರ್ ಸ್ಟೋವ್ (84) ಅರ್ಧಶತಕ ಮತ್ತು ಸ್ಯಾಮ್ ಬಿಲಿಂಗ್ಸ್ (118) ಶತಕ ಗಳಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ವಿಫಲಗೊಂಡರು.ಆಸೀಸ್ ಪರ ಶಿಸ್ತಿ ಬದ್ಧ ಬೌಲಿಂಗ್ ಸಂಘಟಿಸಿದ ಹೇಜಲ್ ವುಡ್ 26ಕ್ಕೆ 3 ವಿಕೆಟ್ ಉರುಳಿಸಿದರೆ, ಝಂಪಾ 55ಕ್ಕೆ 4 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.
ಇದಕ್ಕೂ ಮುನ್ನವೇಗಿ ಜೋಫ್ರಾ ಆರ್ಚರ್(57ಕ್ಕೆ 3) ಮತ್ತು ಮಾರ್ಕ್ ವುಡ್ (54ಕ್ಕೆ 3) ಅವರು ಕರಾರುವಕ್ ದಾಳಿಯ ನಡುವೆಯೂ ಪ್ರವಾಸಿ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ ಅವರ ತಾಳ್ಮೆ ಹಾಗೂ ಮ್ಯಾಕ್ಸ್ ವೆಲ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪೈಪೋಟಿ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಇತ್ತಂಡಗಳ ಎರಡನೇ ಪಂದ್ಯ ಸೆಪ್ಟೆಂಬರ್ 13 ಮ್ಯಾಂಚೆಸ್ಟರ್ ನಲ್ಲೇ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 50 ಓವರ್ ಗಳಲ್ಲಿ 9 ವಿಕೆಟ್ ಗೆ 294 (ಮಿಚೆಲ್ ಮಾರ್ಷ್ 73, ಮ್ಯಾಕ್ಸ್ ವೆಲ್ 77; ಆರ್ಚರ್ 57ಕ್ಕೆ 3, ಮಾರ್ಕ್ ವುಡ್ 54ಕ್ಕೆ 3).
ಇಂಗ್ಲೆಂಡ್ : 50 ಓವರ್ ಗಳಲ್ಲಿ 9 ವಿಕೆಟ್ ಗೆ 275 (ಬೈರ್ ಸ್ಟೋವ್ 84, ಸ್ಯಾಮ್ ಬಿಲಿಂಗ್ಸ್ 118;ಹೇಜಲ್ ವುಡ್ 26ಕ್ಕೆ 3, ಝಂಪಾ 55ಕ್ಕೆ 4).

loading...