ಐಪಿಎಲ್: ದೆಹಲಿಗೆ ಪಂಜಾಬ್ ಸವಾಲು

0
3

ದುಬೈ:- ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿ ಆಗಲಿದ್ದು, ಉಭಯ ತಂಡದಲ್ಲಿ ಸ್ಟಾರ್ ಬ್ಯಾಟ್ಸ್ ಮನಗಳ ದಂಡೇ ಇದೆ.

ಕಳೆದ ಋತುವಿನಲ್ಲಿ ದೆಹಲಿಯ ತಂಡವು ಪ್ಲೇ ಆಫ್ ತಲುಪಿತ್ತು. ಆದರೆ, ಪಂಜಾಬ್ ಸಾಧನೆ ನಿರಾಶಾದಾಯಕವಾಗಿತ್ತು. ಕಳೆದ ಋತುವಿನಲ್ಲಿ ಪಂಜಾಬ್ ತಂಡವನ್ನು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುನ್ನಡೆಸಿದ್ದರು ಆದರೆ ಈ ಋತುವಿನಲ್ಲಿ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ.

ಉಭಯ ತಂಡಗಳು ಹಲವಾರು ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ದೆಹಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೇಲೆ ಇರುತ್ತದೆ. ಕಳೆದ ಋತುವಿನಲ್ಲಿ 16 ಪಂದ್ಯಗಳಲ್ಲಿ ಪಂತ್ 488 ರನ್ ಗಳಿಸಿದ್ದರು.

ಮಧ್ಯ ಮತ್ತು ಡೆತ್ ಓವರ್‌ಗಳಲ್ಲಿ ದೊಡ್ಡ ಹೊಡೆತವನ್ನು ಬಾರಿಸುವ ಕ್ಷಮತೆಯನ್ನು ಪಂತ್ ಹೊಂದಿದ್ದಾರೆ. ಅವರು ವೇಗದ ಮತ್ತು ಸ್ಪಿನ್ ಬೌಲರ್‌ಗಳನ್ನು ಸಮಾನವಾಗಿ ದಂಡಿಸಬಲ್ಲರು. ಆದರೆ ಕೊರೊನಾದಿಂದಾಗಿ ದೀರ್ಘಕಾಲದವರೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರಉಳಿದ ನಂತರ ಮೈದಾನದಲ್ಲಿ ಅವರ ಬ್ಯಾಟ್ ಹೇಗೆ ಸ್ಫೋಟಿಸುತ್ತದೆ ಎಂಬುದನ್ನು ನೋಡಲು ಕಾತುರವಾಗಿದೆ.

ಇಂಗ್ಲೆಂಡ್‌ನಿಂದ ಟಿ-20 ಮತ್ತು ಏಕದಿನ ಸರಣಿಯನ್ನು ಆಡಿದ ನಂತರ ಪಂಜಾಬ್‌ನ ಆಸ್ಟ್ರೇಲಿಯಾದ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ದುಬೈ ತಲುಪಿದ್ದಾರೆ. ಇಂಗ್ಲೆಂಡ್‌ನಿಂದ ದುಬೈಗೆ ಆಗಮಿಸಿದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಆಟಗಾರರನ್ನು 36 ಗಂಟೆಗಳ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದ್ದು, ಆರಂಭದಿಂದಲೇ ತಮ್ಮ ತಂಡಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಈ ಆಟಗಾರರು ಒಂದು ಜೈವಿಕ ಸುರಕ್ಷತೆಯ ವಾತಾವರಣದಿಂದ, ಮತ್ತೊಂದು ಜೈವಿಕ ಸುರಕ್ಷತಾ ಪರಿಸರಕ್ಕೆ ಬರುವುದರಿಂದ ಕ್ವಾರಂಟೈನ್ ಅವಧಿಯನ್ನು ಕಡಿತ ಗೊಳಿಸುವಂತೆ ಮಾಲೀಕರು ಒತ್ತಾಯಿಸಿದ್ದರು.

ದೆಹಲಿಯ ಬೌಲಿಂಗ್ ವಿಭಾಗವನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡಾ ಅವರ ಮೇಲೆ ಅವಲಂಬಿತವಾಗಿದ್ದು, ಅವರು ಕಳೆದ ಋತುವಿನಲ್ಲಿ 25 ವಿಕೆಟ್ ಗಳನ್ನು ಗಳಿಸಿದ್ದರು. ಡೆತ್ ಓವರ್‌ಗಳಲ್ಲಿ ರಬಾಡಾ 19 ವಿಕೆಟ್ ಪಡೆದಿದ್ದಾರೆ. ಆಫ್ ಸ್ಪಿನ್ನರ್ ಅಶ್ವಿನ್ ತಮ್ಮ ಹಿಂದಿನ ತಂಡದ ಪಂಜಾಬ್ ವಿರುದ್ಧ ಮಿಂಚಬೇಕಿದೆ.

ಎಡಗೈ ವೇಗದ ಬೌಲರ್ ಡೇನಿಯಲ್ ಸೈಮ್ಸ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಬಲ್ಲ ಕ್ಷಮತೆ ಹೊಂದಿದ್ದಾರೆ. ಅನುಭವಿ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಕೂಡ ತಂಡದಲ್ಲಿದ್ದಾರೆ.

ಈ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್‌ನ ಲಸಿತ್ ಮಾಲಿಂಗ ಅವರ ಹೆಚ್ಚು ವಿಕೆಟ್ ದಾಖಲೆಯನ್ನು ಮುರಿಯುವ ಕನಸಿನಲ್ಲಿ ಹಿರಿಯ ಲೆಗ್ ಸ್ಪಿನ್ನರ್ ದೆಹಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಇದ್ದಾರೆ. ಐಪಿಎಲ್‌ನ 122 ಪಂದ್ಯಗಳಲ್ಲಿ ಮಾಲಿಂಗ 170 ವಿಕೆಟ್ ಪಡೆದರೆ, ಮಿಶ್ರಾ 147 ಪಂದ್ಯಗಳಲ್ಲಿ 157 ವಿಕೆಟ್ ಪಡೆದಿದ್ದಾರೆ. ಮಾಲಿಂಗ ಅವರ ದಾಖಲೆಯನ್ನು ಮುರಿಯಲು 14 ವಿಕೆಟ್ ಅಗತ್ಯವಿದೆ.

ಮೊದಲ ಬಾರಿಗೆ ಪಂಜಾಬ್ ಗೆ ಪ್ರಶಸ್ತಿ ಮುಕುಟ ತೊಡಿಸುವ ಜವಾಬ್ದಾರಿ ರಾಹುಲ್ ಅವರ ಹೆಗಲ ಮೇಲಿದೆ. ಪ್ರತಿ ಋತುವಿನಲ್ಲೂ ಪಂಜಾಬ್ ನಾಯಕ ಬದಲಾಗಿದ್ದು, 13 ಋತುಗಳಲ್ಲಿ ರಾಹುಲ್ ತಂಡದ 12 ನೇ ನಾಯಕ.

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ. ತಂಡವು ಯುವ ಲೆಗ್ ಸ್ಪಿನ್ನರ್ ರವಿ ಬಿಶ್ನೊಯ್ ಅವರನ್ನು ಹೊಂದಿದ್ದು, ಅವರು ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು. ಕಳೆದ ದೇಶೀಯ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೃಷ್ಣಪ್ಪ ಗೌತಮ್ ಮೇಲ ನಿರೀಕ್ಷೆ ಹೆಚ್ಚಿದೆ. ಇಂಗ್ಲೆಂಡ್ ವೇಗದ ಬೌಲರ್ ಕ್ರಿಸ್ ಜೋರ್ಡಾನ್ ಕೂಡ ತಂಡದ ದಾಳಿಯನ್ನು ಬಲಪಡಿಸಲಿದ್ದಾರೆ.

loading...