ಐಪಿಎಲ್‌ಗೆ ಆರ್‌ಸಿಬಿ ಸಂಭಾವ್ಯ ತಂಡ ಕಟ್ಟಿದ ಸುನೀಲ್ ಗವಾಸ್ಕರ್

0
7

ನವದೆಹಲಿ:- ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭಾವ್ಯ ಅಂತಿಮ 11 ಆಟಗಾರರನ್ನು ಆಯ್ಕೆ ಮಾಡಿದ್ದಾರೆ.
ಒಂದು ವೇಳೆ ತಾನು ಆರ್‌ಸಿಬಿ ತಂಡದ ನಾಯಕನಾಗಿದ್ದಲ್ಲಿ ವಿರಾಟ್ ಕೊಹ್ಲಿಯನ್ನು ಆರಂಭಿಕನಾಗಿ ಬ್ಯಾಟಿಂಗ್ ಮಾಡುವಂತೆ ಹೇಳುತ್ತಿದ್ದೆ ಎಂದು ಗವಾಸ್ಕರ್ ಹೇಳಿದ್ದಾರೆ. ಆರೋನ್ ಫಿಂಚ್ ಜತೆಗೆ ಪಾರ್ಥಿವ್ ಪಟೇಲ್ ಅಥವಾ ದೇವದತ್ ಪಡಿಕ್ಕಲ್ ಆರಂಭಿಕರಾಗಿ ಆಡಿಸಬಹುದು. ಆದರೆ, ಇವರು ತಾಂತ್ರಿಕವಾಗಿ ವಿಭಿನ್ನರಾಗಿದ್ದಾರೆ ಎಂಬುದು ಗವಾಸ್ಕರ್ ಅಭಿಮತ.
ಕರ್ನಾಟಕದ ದೇವದತ್ ಪಡಿಕ್ಕಲ್ 2019-20ರ ದೇಶಿ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಹಾಗಾಗಿ, ಖಂಡಿತವಾಗಿಯೂ ಈ ಬಾರಿ ಐಪಿಎಲ್‌ನಲ್ಲಿ ಅವರು ಅತ್ಯಾಕರ್ಷಕ ಆಟಗಾರ. ಆದರೆ ಸುನೀಲ್ ಗವಾಸ್ಕರ್, ಅನುಭವದ ಆಧಾರದ ಮೇಲೆ ಆರೋನ್ ಫಿಂಚ್ ಜೆತೆಗೆ ಇನಿಂಗ್ಸ್ ಆರಂಭಿಸಲು ಪಾರ್ಥಿವ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ಮೂರನೇ ಕ್ರಮಾಂಕ ಹಾಗೂ ಎಬಿ ಡಿವಿಲಿಯರ್ಸ್ಗೆ ನಾಲ್ಕನೇ ಕ್ರಮಾಂಕ ನೀಡಿದ್ದಾರೆ.
ಸ್ಪೋರ್ಟ್ಸ್ ತಕ್ ಜತೆ ಮಾತನಾಡಿದ ಸುನೀಲ್ ಗವಾಸ್ಕರ್,” ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಹೆಚ್ಚು ಎಸೆತಗಳನ್ನು ಆಡಿದರೆ, ಅವರಿಬ್ಬರೂ ತಂಡಕ್ಕೆ ಹೆಚ್ಚು ರನ್‌ಗಳನ್ನು ಗಳಿಸಲಿದ್ದಾರೆ. ಹಾಗಾಗಿ, ನಾನು ನಾಯಕನಾಗಿದ್ದರೆ, ವಿರಾಟ್ ಕೊಹ್ಲಿಗೆ ಓಪನಿಂಗ್ ಆಡುವಂತೆ ಹೇಳುತ್ತಿದ್ದೆ. ಆದರೆ, ದೇವದತ್ ಪಡಿಕ್ಕಲ್ ಹಾಗೂ ಪಾರ್ಥಿವ್ ಪಟೇಲ್ ಕೂಡ ಉತ್ತಮ ಆಯ್ಕೆ,” ಎಂದರು.
“ಪಡಿಕ್ಕಲ್ ಎಡಗೈ ಬ್ಯಾಟ್ಸ್ಮನ್ ಆಗಿದ್ದು, ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದ್ದರಿಂದ ಅವರು ಫಿಂಚ್ ಜತೆಗೆ ಓಪನಿಂಗ್ ಮಾಡಬಹುದು, ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಆದರೆ, ಪಾರ್ಥಿವ್ ಪಟೇಲ್ ಇರುವುದರಿಂದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಫಿಂಚ್ ಜತೆ ಆಡಲು ಕರ್ನಾಟಕ ಬ್ಯಾಟ್ಸ್ಮನ್ ಇನ್ನಷ್ಟು ಸಮಯ ಕಾಯಬೇಕು,” ಎಂದು ಹೇಳಿದರು.
ಸುನೀಲ್ ಗವಾಸ್ಕರ್ ಯುವ ಆಟಗಾರರಿಗೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ಶಿವಂ ದುಬೆಗೆ 5ನೇ ಸ್ಥಾನ ನೀಡಿದ್ದು, ಯುವ ಆಲ್‌ರೌಂಡರ್‌ಗೆ ವಿಶ್ವಾಸ ತುಂಬಿದರೆ, ಖಂಡಿತಾ ಆರ್‌ಸಿಬಿ ನೆರವಾಗಲಿದ್ದಾರೆಂಬುದು ಮಾಜಿ ನಾಯಕನ ಅಭಿಪ್ರಾಯ. ಶ್ರೀಲಂಕಾ ಆಲ್‌ರಂಡರ್ ಇಸುರು ಉದಾನ, ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಹಾಗೂ ಭಾರತದ ಟಿ20 ವಿಶೇಷ ಆಟಗಾರ ವಾಷಿಂಗ್ಟನ್ ಸುಂದರ್‌ಗೆ ಅವರಿಗೆ ಅಂತಿಮ 11ರಲ್ಲಿ ಸ್ಥಾನ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಯಜ್ವೇಂದ್ರ ಚಹಲ್ ಆರ್‌ಸಿಬಿಯಲ್ಲಿ ಉತ್ತಮ ಸ್ಪಿನ್ನರ್ ಆಗಿದ್ದಾರೆ. ಹಾಗಾಗಿ ಅವರು ಸುನೀಲ್ ಗವಾಸ್ಕರ್ ಸಂಭಾವ್ಯ ಅಂತಿಮ 11ರಲ್ಲಿ ನೇರವಾಗಿ ಸ್ಥಾನವನ್ನು ಪಡೆದಿದ್ದಾರೆ.
ನವದೀಪ್ ಸೈನಿ ಹಾಗೂ ಉಮೇಶ್ ಯಾದವ್ ಇಬ್ಬರು ವೇಗಿಗಳನ್ನು 71ರ ಪ್ರಾಯದ ಬ್ಯಾಟಿಂಗ್ ದಿಗ್ಗಜ ಆಯ್ಕೆ ಮಾಡಿದ್ದಾರೆ. ಯುಎಇಯ ಪಿಚ್‌ಗಳು ನಿಧಾನಗತಿಯಿಂದ ಕೂಡಿದ್ದು, ಸ್ಪಿನ್ ಬೌಲರ್‌ಗಳಿಗೆ ಸಹಕಾರಿಯಾಗಲಿದೆ. ಈ ಕಾರಣದಿಂದ ಹೆಚ್ಚುವರಿ ಸ್ಪಿನ್ನರ್ ಆಗಿ ಗವಾಸ್ಕರ್ ಪವನ್ ನೇಗಿಯನ್ನು ತಂಡಕ್ಕೆ ಆರಿಸಿಕೊಂಡರು.
“ಐದನೇ ಕ್ರಮಾಂಕಕ್ಕೆ ಶಿವಂ ದುಬೆಯನ್ನು ಬೆಂಬಲಿಸುತ್ತೇನೆ. ಇನ್ನುಳಿದ ಇಬ್ಬರು ಆಲ್‌ರೌಂಡರ್‌ಗಳಾದ ಕ್ರಿಸ್ ಮೋರಿಸ್ ಹಾಗೂ ಇಸುರು ಉದಾನ ಅವರನ್ನು ನನ್ನ ನೆಚ್ಚಿನ ಅಂತಿಮ 11ರಲ್ಲಿ ಆಯ್ಕೆ ಮಾಡುತ್ತೇನೆ. ಯಜ್ವೇಂದ್ರ ಚಹಲ್ ಆರ್‌ಸಿಬಿ ನಂ.1 ಬೌಲರ್ ಆಗಿದ್ದು, ಅವರು ನೇರವಾಗಿ ತಂಡದಲ್ಲಿ ಆಡಿಲಿದ್ದಾರೆ. ವಾಷಿಂಗ್ಟನ್ ಸುಂದರ್ ಆಲ್‌ರೌಂಡರ್ ಆಗಿ ಆಡಲಿದ್ದಾರೆ. ಈ ಇಬ್ಬರು ಸ್ಪಿನ್ನರ್‌ಗಳು ಇಲ್ಲಿನ ಪಿಚ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಲಿದ್ದಾರೆ, ಇದು ತಂಡಕ್ಕೆ ಲಾಭವಾಗಲಿದೆ,” ಎಂದು ತಿಳಿಸಿದರು.

“ನವದೀಪ್ ಸೈನಿ ಹಾಗೂ ಉಮೇಶ್ ಯಾದವ್ ಅವರೊಂದಿಗೆ ತಂಡವನ್ನು ಪೂರ್ಣಗೊಳಿಸುತ್ತೇನೆ. ಆರ್‌ಸಿಬಿ ಹೆಚ್ಚುವರಿ ಸ್ಪಿನ್ನರ್ ಆಡಿಸಬೇಕಾದರೆ, ಪವನ್ ನೇಗಿ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅವರು ಚೆಂಡನ್ನು ತಿರುಗಿಸುತ್ತಾರೆ ಹಾಗೂ ದೊಡ್ಡ-ದೊಡ್ಡ ಹೊಡೆತಗಳನ್ನು ಹೊಡೆಯುತ್ತಾರೆ,” ಎಂದು ಸುನೀಲ್ ಗವಾಸ್ಕರ್ ಹೇಳಿದರು.

ಐಪಿಎಲ್ 2020ಕ್ಕೆ ಸುನೀಲ್ ಗವಾಸ್ಕರ್ ಆರ್‌ಸಿಬಿ ಇಲೆವೆನ್: ಆರೋನ್ ಫಿಂಚ್, ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಶಿವಂ ದುಬೆ, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್/ಪವನ್ ನೇಗಿ, ಇಸುರು ಉದನಾ, ಯಜ್ವೇಂದ್ರ ಚಹಲ್, ನವದೀಪ್ ಸೈನಿ.

loading...