ಭಾನುವಾರದ ಮಜಾ ಹೆಚ್ಚಿಸಲಿದೆ ಕಿಂಗ್ಸ್-ರಾಯಲ್ಸ್ ಫೈಟ್

0
43

ಶಾರ್ಜಾ:- ಯುವ ಆಟಗಾರ ಸಂಜು ಸ್ಯಾಮ್ಸನ್ ಹಾಗೂ ನಾಯಕ ಕೆ.ಎಲ್ ರಾಹುಲ್ ಅವರ ನಡುವೆ ಭಾನುವಾರ ಜಿದ್ದಾಜಿದ್ದಿನ ಕದನ ಏರ್ಪಡಲಿದ್ದು, 13ನೇ ಆವೃತ್ತಿ ಐಪಿಎಲ್ ನ ಒಂಬತ್ತನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿಗಾಗಿ ಕಾದಾಟ ನಡೆಸಲಿವೆ.

ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಕಿಂಗ್ಸ್ ಸೋಲು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಪಂಜಾಬ್, ಬೆಂಗಳೂರು ತಂಡವನ್ನು ಮಣಿಸಿತ್ತು. ಇನ್ನು ರಾಯಲ್ಸ್ 16 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದೆ.

ಬೆಂಗಳೂರು ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಶತಕ ಬಾರಿಸಿರುವ ಕೆ.ಎಲ್ ರಾಹುಲ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಆರಂಭಿಕ ಮಯಾಂಕ್ ಅಗರ್ ವಾಲ್, ಕರುಣ್ ನಾಯರ್, ನಿಕೋಲಸ್ ಪೊರನ್ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುವ ಅವಶ್ಯಕತೆ ಇದೆ. ಇನ್ನು ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ತಂಡದ ಅಗತ್ಯಕ್ಕೆ ತಕ್ಕಂತೆ ಆಟ ಆಡಬೇಕಿದೆ.

ಪಂಜಾಬ್ ತಂಡದ ವೇಗಿ ಶೆಲ್ಡನ್ ಕಾಟ್ರೆಲ್ ಹಾಗೂ ಮೊಹಮ್ಮದ್ ಶಮಿ ಹೊಸ ಚೆಂಡಿನಿಂದ ಮೋಡಿಯ ಪ್ರದರ್ಶನ ನೀಡಬಲ್ಲರು. ಇವರ ಉತ್ತಮ ಪ್ರದರ್ಶನ ಮುಂದುವರೆಸಬೇಕಿದೆ. ಇನ್ನು ಸ್ಪಿನ್ ಬೌಲರ್ ರವಿ ಬಿಷ್ಣೋಯಿ, ಮುರಗನ್ ಅಶ್ವನಿ ಜೋಡಿ ಎರಡು ತುದಿಯಿಂದ ಸ್ಪಿನ್ ದಾಳಿ ನಡೆಸಿ ಎದುರಾಳಿಗೆ ಕಾಟ ನೀಡಬೇಕಿದೆ.

ಆರಂಭಿಕ ಪಂದ್ಯದಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್ ಅವರ ಮೇಲೆ ನಿರೀಕ್ಷೆ ಇದೆ. ಇವರು ತಮ್ಮ ಕಲಾತ್ಮಕ ಬ್ಯಾಟಿಂಗ್ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಬೇಕಿದೆ. ಇನ್ನು ಸ್ಟೀವನ್ ಸ್ಮಿತ್ ಮತ್ತೊಮ್ಮೆ ಜವಾಬ್ದಾರಿಯುತ ಆಟದ ಪ್ರದರ್ಶನ ನೀಡಬೇಕಿದೆ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಡೇವಿಡ್ ಮಿಲ್ಲರ್, ರಾಬಿನ್ ಉತ್ತಪ್ಪ, ರಾಹುಲ್ ತಿವಾಟಿಯಾ, ರಿಯಾನ್ ಪರಾಗ್ ರನ್ ವೇಗಕ್ಕೆ ಚುರುಕು ಮುಟ್ಟಿಸ ಬೇಕಿದೆ.

ರಾಜಸ್ಥಾನ ಬೌಲಿಂಗ್ ವಿಭಾಗದಲ್ಲಿ ಜಯದೇವ್ ಉನಾದ್ಕಟ್, ಜೋಫ್ರಾ ಆರ್ಚರ್ ತಮ್ಮ ಕರಾರುವಕ್ ದಾಳಿಯಿಂದ ಪಂಜಾಬ್ ಬ್ಯಾಟ್ಸ್ ಮನ್ ಗಳನ್ನು ಕಾಡಬೇಕಿದೆ. ಶ್ರೇಯಸ್ ಗೋಪಾಲ್ ತಂಡಕ್ಕೆ ತನ್ನ ಸ್ಪಿನ್ ಬೌಲಿಂಗ್ ಮೂಲಕ ಕಿಂಗ್ಸ್ ತಂಡಕ್ಕೆ ಕಾಟ ನೀಡಬೇಕಿದೆ. ಅಂದಾಗ ಮಾತ್ರ ಗೆಲುವಿನ ಮಾಲೆ ತೊಡಲು ಸಾಧ್ಯ.

loading...