ದೇಶದ ಏಕೈಕ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ :

0
31

ದೇಶದ ಏಕೈಕ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ :

ಕನ್ನಡಮ್ಮ ಸುದ್ದಿ -ಸಂಕೇಶ್ವರ : ದೇಶದ ಏಕೈಕ ವಿದ್ಯುತ್ ಪೂರೈಕೆ ಸಹಕಾರ ಸಂಸ್ಥೆಯಾಗಿರುವ ಪ್ರತಿಷ್ಠಿತ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕತ್ತಿ ಸಹೋದರರ ಬೆಂಬಲಿತ 15 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ರಾಜಕೀಯ ಜಿದ್ದಾ-ಜಿದ್ದಿಗೆ ಸಾಕ್ಷಿಯಾಗುತ್ತಿದ್ದ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಕಳೆದ ಸುಮಾರು 26 ವರ್ಷಗಳಿಂದ ಕತ್ತಿ ಸಹೋದರರ ಪೆನಲ್ ಜಯಭೇರಿ ಭಾರಿಸುತ್ತಲಿದ್ದು, ಈ ಬಾರಿಯೂ ಸಹ ಮಾಜಿ ಸಚಿವ ಉಮೇಶ ಕತ್ತಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿದೆ.

ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಉತ್ತಮ ಸೇವೆ ಹೆಸರಾಗಿರುವ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ಗ್ರಾಹಕರಿಗೆ ಸದಸ್ಯತ್ವದ ಮೂಲಕ ವಿದ್ಯುತ್ ಪೂರೈಕೆ ಮಾಡುತ್ತಲಿದ್ದು, ಗ್ರಾಮೀಣ ಭಾಗದಲ್ಲಿ ರೈತರ ಪಂಪಸೆಟ್‌ಗಳಿಗೂ ಸಹ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಮೂಲಕ ಸರಕಾರೇತರ ಸಂಸ್ಥೆಯಾಗಿ ಗ್ರಾಹಕರ ಹಿತ ಕಾಪಾಡುವಲ್ಲಿ ಮುಂಚೂಣಿಯಲ್ಲಿದೆ.

15 ಅಭ್ಯರ್ಥಿಗಳು ಅವಿರೋಧ ಆಯ್ಕೆ :

ಸಾಮಾನ್ಯ ಕ್ಷೇತ್ರದಿಂದ ಮಾಜಿ ಸಂಸದ ರಮೇಶ ಕತ್ತಿ ಪುತ್ರ ಲವ ಕತ್ತಿ, ಅಶೋಕ ಬಸಪ್ಪಾ ಚಂದಪ್ಪಗೋಳ, ಜೋಮಲಿಂಗ ಬಸಪ್ಪಾ ಪಟೋಳಿ, ಕಲಗೌಡ ಬಸಗೌಡ ಪಾಟೀಲ, ಮಾಜಿ ಸಚಿವ ದಿ. ಮಲ್ಹಾರಿಗೌಡ ಪಾಟೀಲ ಮೊಮ್ಮಗ ಕುನಾಲ ಶಿವಗೌಡ ಪಾಟೀಲ, ಜಯಗೌಡ ಶಿವಗೌಡ ಪಾಟೀಲ, ಶಶಿರಾಜ ಬಾಪುಗೌಡ ಪಾಟೀಲ, ಬಸಗೌಡ ಪರಪ್ಪ ಮಗೆನ್ನವರ, ರವೀಂದ್ರ ಬಸವಂತ ಹಿಡಕಲ್, ಹಿಂದುಳಿದ ಅ ವರ್ಗದಿಂದ ಕೆಂಚಪ್ಪಾ ಕೆಂಚಪ್ಪಾ ಬೆಣಚಿನಮರಡಿ, ಹಿಂದುಳಿದ ವ ವರ್ಗದಿಂದ ವಿಷ್ಣು ಭರಮಾ ರೇಡೆಕರ, ಪ.ಜಾ ಕ್ಷೇತ್ರದಿಂದ ಈರಪ್ಪಾ ರುದ್ರಪ್ಪಾ ಬಂಜಿರಾಮ, ಮಹಿಳಾ ಮೀಸಲು ಕ್ಷೇತ್ರದಿಂದ ಸಂಗೀತಾ ಶಿವರಾಯಿ ದಪ್ಪಾದೂಳಿ, ಶಿವಲೀಲಾ ಲಗಮಣ್ಣಾ ಮಣಗುತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯುವಕರಿಗೆ ಮಣೆ-ಹಿರಿಯರಿಗೆ ಕೋಕ್:
ಯುವಕರಿಗೆ ಅವಕಾಶ ಕೊಡುವ ದೃಷ್ಟಿಯಿಂದ ಈ ಬಾರಿ ಹಿರಿಯರನ್ನು ಕೈಬಿಡಲಾಗಿದ್ದು, ಮಾಜಿ ಸಂಸದ ರಮೇಶ ಕತ್ತಿ ಅವಳಿ ಪುತ್ರ ಲವ ಕತ್ತಿ ಸಹಕಾರ ಕ್ಷೇತ್ರದ ಮೂಲಕ ಸಾರ್ವಜನಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಮಾಜಿ ಸಚಿವ ದಿ. ಮಲ್ಹಾರಿಗೌಡ ಪಾಟೀಲ ಮೊಮ್ಮಗ ಕುನಾಲ ಪಾಟೀಲ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಬಹುತೇಕ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ಒಟ್ಟಾರೆಯಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮೂಲಕ ದೇಶದ ಗಮನ ಸೆಳೆದಿರುವ ವಿದ್ಯುತ್ ಸಂಸ್ಥೆಯ ಅವಿರೋಧ ಆಯ್ಕೆಗೆ ಪಕ್ಷಾತೀತವಾಗಿ ಬೆಂಬಲ ದೊರೆತಿರುವುದು ಸಂಸ್ಥೆಯ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿದ್ದು, ಹಲವು ಹಿರಿಯ-ಕಿರಿಯ ಸಹಕಾರಿಗಳ ಬೆಂಬಲ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಲಿರುವುದು ಸುಳ್ಳಲ್ಲ.

ಬಾಕ್ಸ:
ಹುಕ್ಕೇರಿ ತಾಲೂಕಿನ ಜನರಿಗೆ ಸ್ವಾವಲಂಬಿಯಾಗಿ ಬದುಕು ಸಾಗಿಸಬೇಕೆಂಬ ಉದ್ದೇಶದಿಂದ ಸ್ವಾತಂತ್ರö್ಯ ಸೇನಾನಿ ಅಪ್ಪಣಗೌಡ ಪಾಟೀಲ ಅವರು ಸ್ಥಾಪಿಸಿದ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ತಾಲೂಕಿನ ಜನ ಹಾಗೂ ಶಾಸಕ ದ್ವಯರು ಸಹಕಾರ ನೀಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಸಹಕಾರ ರಂಗ ಮತ್ತಷ್ಟು ಬಲಗೊಳ್ಳಲಿದೆ. ಬರುವ ದಿನಮಾನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ದೊರೆಯುವ ಸೌಲಭ್ಯ ಬಳಸಿಕೊಂಡು ತಾಲೂಕಿನಲ್ಲಿರುವ ತೋಟದ ಗುಂಪು ಮನೆಗಳಿಗೂ ನಿರಂತರ ವಿದ್ಯುತ್ ಪೂರೈಸುವ ಸಂಕಲ್ಪ ಮಾಡಲಾಗಿದೆ.

ರಮೇಶ ಕತ್ತಿ
ಮಾಜಿ ಸಂಸದರು,

ಬಾಕ್ಸ:
ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಯಾವುದೇ ರಾಜಕೀಯ ಬೆರೆಸದೇ ಅವಿರೋಧ ಆಯ್ಕೆ ಮಾಡಲಾಗಿದೆ. ಸಂಘದ ನೂತನ ಆಡಳಿತ ಮಂಡಳಿ ಜನಪರ ಕಾರ್ಯಕಗಳನ್ನು ಕೈಕೊಳ್ಳುವ ಮೂಲಕ ಜನರ ಹಿತಕಾಯಲಿದೆ.
ಉಮೇಶ ಕತ್ತಿ
ಶಾಸಕರು, ಹುಕ್ಕೇರಿ

loading...