ಪ್ರವಾಹ ಸಂತ್ರಸ್ತರ ನೆರವಿಗೆ ಸರ್ಕಾರ ಬದ್ಧ- ಸಚಿವ ಅಶೋಕ್

0
7

ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರ ಸಮೀಕ್ಷೆ ಪೂರ್ಣಗೊಂಡು ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಲಾಗಿರುವ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕು. ಈಗಾಗಲೇ ಪರಿಹಾರ ಪಡೆದವರು ಮನೆ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಯ ಸಚಿವ ಆರ್. ಅಶೋಕ ಅವರು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅತಿವೃಷ್ಟಿ ಹಾಗೂ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ(ಅ.19) ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಂದು ವೇಳೆ ತಂತ್ರಾಂಶದಲ್ಲಿ ಬೋಗಸ್ ಎಂಟ್ರಿ ಆಗಿರುವುದು ಕಂಡುಬಂದರೆ ರದ್ದುಪಡಿಸಿ, ಉಳಿದ ಎಲ್ಲ ಕೆಟಗರಿ ಮನೆಗಳ ಸಮೀಕ್ಷೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಕೂಡಲೇ ಪರಿಹಾರ ಬಿಡುಗಡೆಗೊಳಿಸಿ, ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ತಿಳಿಸಿದರು.

ನಿರ್ಮಾಣ ವಿಳಂಬ ಸಚಿವರ ಬೇಸರ:

ಅತಿವೃಷ್ಟಿ ಹಾಗೂ ಪ್ರವಾಹದಿಂದ ನೊಂದವರಿಗೆ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ
ಕಳೆದ ಬಾರಿ ಪ್ರವಾಹದಲ್ಲಿ ಉಂಟಾಗಿರುವ ಹಾನಿಯನ್ನು ಇದುವರೆಗೆ ಭರಿಸಿಲ್ಲ ಹಾಗೂ ಮನೆ ನಿರ್ಮಾಣಕ್ಕೆ ಪರಿಹಾರ ನೀಡಿಲಗಲ ಎಂಬ ದೂರುಗಳು‌ ವ್ಯಾಪಕವಾಗಿ ಕೇಳಿಬರುತ್ತಿವೆ.

ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದ್ದಾಗ್ಯೂ ಇದುವರೆಗೆ ಎಲ್ಲ ಕುಟುಂಬಗಳಿಗೆ ಪರಿಹಾರ ಯಾಕೆ ತಲುಪಿಲ್ಲ ಎಂದು ಜಿಲ್ಲಾಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಹಾನಿಯಾಗಿರುವ ಸುಮಾರು 6000 ಮನೆಗಳ ನಿರ್ಮಾಣಕ್ಕೆ ಪರಿಹಾರ‌ ಬಿಡುಗಡೆ ಮಾಡಿದಾಗ್ಯೂ ಇದುವರೆಗೆ ಕೇವಲ 500 ಮನೆಗಳ ನಿರ್ಮಾಣ ಆಗಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಪರಿಹಾರ ನೀಡಲಾದ ಮನೆಗಳ ನಿರ್ಮಾಣಕ್ಕೆ ಮೊದಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮನೆ ನಿರ್ಮಿಸಿಕೊಳ್ಳದಿದ್ದರೆ ಅಂತಹವರ ಪರಿಹಾರ ರದ್ದುಗೊಳಿಸಬೇಕು ಹಾಗೂ ಮನೆ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಅಶೋಕ ತಿಳಿಸಿದರು.

ಪ್ರತಿವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಹಳ್ಳಿಗಳನ್ನು ಸ್ಥಳಾಂತರಿಸಲು ಅವಕಾಶಗಳಿವೆ. ಆದರೆ ಈಗಾಗಲೆ ನಿರ್ಮಿಸಿ ಕೊಟ್ಟಿರುವ ಮನೆಗಳಿಗೆ ಜನ ಹೊಗದೇ, ಮೊದಲು ಇದ್ದ ಮನೆಗಳಲ್ಲೇ ವಾಸಿಸುತ್ತಿದ್ದಾರೆ.

ಬೆಳೆ ಪರಿಹಾರದ ಸಮಿಕ್ಷೇಯ‌ನ್ನು ಆದಷ್ಟು ಬೇಗ ಮೂಗಿಸಿ ಪರಿಹಾರ ನೀಡಬೇಕು.
ಜಿಲ್ಲಾಡಳಿತ ಪ್ರವಾಹ ನಿರ್ವಹಣೆಗೆ ಮುಂಜಾಗೃತ ಕ್ರಮ ಕೈಗೊಳಬೇಕು. ಆ ಸಂದರ್ಭದಲ್ಲಿ ಅಧಿಕಾರಿಗಳು ರಜೆ ಹಾಕದೇ ಕರ್ತವ್ಯಕ್ಕೆ ಹಾಜರಾಗಬೇಕು; ಪ್ರವಾಹ ನಿರ್ವಹಣೆ ಅನುದಾನ ದುರುಪಯೋಗ ಆಗಬಾರದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಕಬ್ಬು ಬೆಳೆ ಹಾನಿ- ಸಚಿವ ಜಾರಕಿಹೊಳಿ:

ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ, ಜಿಲ್ಲೆಯಲ್ಲಿ ಮಳೆಯಿಂದ ಕಬ್ಬು ಬೆಳೆ ಹಾನಿ ಆಗಿದೆ ಹಾಗಾಗಿ ಸಕ್ಕರೆ ಕಾರ್ಖಾನೆಯವರ ಜತೆ ಸಭೆ ಮಾಡಿ ಕಬ್ಬು ಕಟಾವು ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಹಾರಾಷ್ಟ್ರದ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಬಗ್ಗೆ ಹಾಗೂ ಪ್ರಸ್ತುತ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ನೀರಿನ ಸ್ಥಿಗತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಂದ ಮಾಹಿತಿ‌ ಪಡೆದುಕೊಂಡರು.

ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ಅಗಸ್ಟ್ ಮಾಹೆಯಲ್ಲಿ ಮನೆ ಕಳೆದುಕೊಂಡವರ ವಿವರ ಮಾತ್ರ ಲಾಗಿನ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಯಲ್ಲಿ ಮನೆ ಕಳೆದುಕೊಂಡವರ ವಿವರ ದಾಖಲಾಗಿಲ್ಲ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಮರ್ಪಕ ಸಮೀಕ್ಷೆ ಕೈಗೊಂಡು ಎಲ್ಲ ಅರ್ಹರಿಗೂ ಪರಿಹಾರ ತಲುಪಿಸಬೇಕು ಎಂದು ಹೇಳಿದರು.

ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಕುಡಚಿ ಶಾಸಕ ಪಿ.ರಾಜೀವ್ ಮಾತನಾಡಿ, ಮನೆ ಬಿದ್ದಿರುವ ಜಾಗೆಯಲ್ಲಿಯೇ ಮನೆ ಕಟ್ಟಿಸಬೇಕು ಎಂಬ ಕಾರಣಕ್ಕೆ ತಡವಾಗಿದೆ. ಇದೀಗ ಬೇರೆ ಕಡೆ ಕೂಡ ಕಟ್ಟಿಸಲು ಅವಕಾಶ ಕಲ್ಪಿಸಿರುವುದರಿಂದ ಮನೆ ನಿರ್ಮಾಣ ನಿಧಾನವಾಗಿ ಆರಂಭಗೊಳ್ಳುತ್ತಿದೆ ಎಂದು ತಿಳಿಸಿದರು.

ಗಾಯರಾಣದಲ್ಲಿರುವ ಮನೆಗಳ ಹಾನಿ ವಿವರ ತಂತ್ರಾಂಶದಲ್ಲಿ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡರು.

ಶಾಸಕರಾದ ದುರ್ಯೋಧನ ಐಹೊಳೆ, ಪರಿಹಾರ ಬಿಡುಗಡೆ ಮತ್ತು ಮನೆ ನಿರ್ಮಾಣಕ್ಕೆ ವಿಳಂಬವಾಗುತ್ತಿರುವ ಬಗ್ಗೆ ಗಮನಸೆಳೆದರು.

ಶಾಸಕರಾದ ಅನಿಲ್ ಬೆನಕೆ, ಸಂಪೂರ್ಣ ನಗರ ಪ್ರದೇಶವನ್ನು ಹೊಂದಿರುವ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕೂಡ ಇದುವರೆಗೆ ಮನೆ ಕಳೆದುಕೊಂಡವರ ಸಮರ್ಪಕ ಸಮೀಕ್ಷೆ ಆಗಿಲ್ಲ ಹಾಗೂ ಪರಿಹಾರ ವಿಳಂಬವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ಶಾಸಕರಾದ ಅಭಯ್ ಪಾಟೀಲ, ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ ಎಲ್ಲ ಕುಟುಂಬಗಳ ವಿವರ ಸಮರ್ಪಕವಾಗಿ ದಾಖಲಾಗಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಸಮೀಕ್ಷೆ ಪೂರ್ಣಗೊಂಡಿರುವ ಕುಟುಂಬಗಳಿಗೂ ಪರಿಹಾರ ದೊರೆತಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.

ಶೀಘ್ರ ಬೆಳೆ ಪರಿಹಾರ ಜಮಾ-ಜಿಲ್ಲಾಧಿಕಾರಿ:

ಕಳೆದ ವರ್ಷದಿಂದ ಎದುರಾಗಿರುವ ಅತಿವೃಷ್ಟಿ ಮತ್ತು ಪರಿಹಾರದ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಆಗಸ್ಟ್‌ನಲ್ಲಿ ಶೇ.139 ರಷ್ಟು ಅಧಿಕ ಮಳೆಯಿಂದ ಪ್ರವಾಹ ಸ್ಥಿತಿ ಎದುರಾಗಿತ್ತು. ಸದ್ಯಕ್ಕೆ ಪ್ರವಾಹ ಸ್ಥಿತಿಯಿಲ್ಲ ಎಂದು ತಿಳಿಸಿದರು.

ಹುಕ್ಕೇರಿಯಲ್ಲಿ ಮಾತ್ರ ಅತಿವೃಷ್ಟಿಯಿಂದ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ಧಾರೆ.
ಜಿಲ್ಲೆಯಲ್ಲಿ ಒಟ್ಟಾರೆ 4619 ಮನೆಗಳಿಗೆ ಹಾನಿ ಯಾಗಿದ್ದು, ಸದ್ಯಕ್ಕೆ ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ.

14 ಸಾವಿರ ರೈತರಿಗೆ 6.40 ಕೋಟಿ ಬೆಳೆ ಪರಿಹಾರ ಪಾವತಿಸಲಾಗಿದ್ದು, ಉಳಿದವರಿಗೆ ಶೀಘ್ರ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
1.66 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದು, ಜಂಟಿ ಸಮೀಕ್ಷೆ ನಡೆದಿದ್ದು, ಇದಾದ ಬಳಿಕ ಹಾನಿಯ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು. ಹತ್ತು ದಿನಗಳಲ್ಲಿ ಪರಿಹಾರ ವಿತರಣಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಮನೆಹಾನಿ-488 ಕೋಟಿ ಪರಿಹಾರ ಬಿಡುಗಡೆ:

ಜಿಲ್ಲೆಯಲ್ಲಿ ಕಳೆದ ವರ್ಷ ಮನೆ ಕಳೆದುಕೊಂಡಿರುವ ಎ.ಬಿ ಮತ್ತು ಸಿ ಕೆಟಗರಿಯ ಕುಟುಂಬಗಳಿಗೆ ಒಟ್ಟು 488 ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಹಣದ ಕೊರತೆಯಿಲ್ಲ; ಮಳೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ವಿಳಂಬವಾಗಿದೆ.
ಪಟ್ಟಿಯಿಂದ ಬಿಟ್ಟು ಹೋಗಿರುವ ಮನೆಗಳನ್ನು ಮರು ಸಮೀಕ್ಷೆ ಕೈಗೊಂಡು ಪುನಃ ವಸತಿ ನಿಗಮಕ್ಕೆ ಕಳಿಸಲಾಗಿದೆ.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ.ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

loading...