ನೈಟ್ ಕಪ್ರ್ಯೂ ಬಗ್ಗೆ ಏ.18ಕ್ಕೆ ಪ್ರತಿಪಕ್ಷಗಳ ಸಭೆ: ಸಿಎಂ ಯಡಿಯೂರಪ್ಪ

0
16

 

ಬೆಳಗಾವಿ

ರಾಜ್ಯದಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿದೆ. ಈ‌ ಹಿನ್ನೆಲೆಯಲ್ಲಿ ರಾತ್ರಿ ಕಪ್ರ್ಯೂ ಮಾಡುವ ಬಗ್ಗೆ ಏ.18 ಸಂಜೆ 4ಕ್ಕೆ ವಿಧಾನಸೌಧದಲ್ಲಿ ಪ್ರತಿಪಕ್ಷಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ಬೆಳಗಾವಿ ಲೋಕಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದೇಶ ಸೇರಿದಂತೆ ರಾಜ್ಯದಲ್ಲಿಯೂ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗಿರುವುದರಿಂದ ಜನತಾ ಕಪ್ರ್ಯೂ ಮಾಡಿದ್ದಾರೆ. ನಮ್ಮಲ್ಲಿಯೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜನರು ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ಇದರಲ್ಲಿ ಜನರ ಸಹಕಾರವು ಅತೀ ಮುಖ್ಯವಾಗಿದೆ ಎಂದರು.

ಯಾವ ಯಾವ ಜಿಲ್ಲೆಯಲ್ಲಿ ಕೋವಿಡ್-19 ಹೆಚ್ಚಿಗೆ ಆಗುತ್ತಿದೆಯೋ ಅಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ವರೆಗೆ ರಾತ್ರಿ ಕಪ್ರ್ಯೂ ಮಾಡುವ ಚಿಂತನೆ ನಡೆಸಲಾಗುವುದು. ಮಹಾರಾಷ್ಟ್ರ ದಿಂದ ಬರುತ್ತಿರುವ ಜನರನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು.
ಈಗಾಗಲೇ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರ ಉತ್ತಮವಾದ ವಾತಾವರಣ ಇದೆ. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರು ಸುಮಾರು ನಾಲ್ಕು ಲಕ್ಷಗಳ ಮತಗಳ ಅಂತರದಿಂದ ಗೆಲವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ದಿನೇ ದಿನೇ ಬಿಜೆಪಿ‌ ಅಭ್ಯರ್ಥಿ ಪರ ವಾತಾವರಣ ವಾಗುತ್ತಿದೆ. ಹಗಲು ರಾತ್ರಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಾಳೆ ಸಂಜೆಯವರೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿಳಲಿದೆ. ಮತದಾರರಲ್ಲಿ ವಿನಂತಿ ಮಾಡುತ್ತೇನೆ. ಸುರೇಶ ಅಂಗಡಿ ಅವರ ತ್ಯಾಗವನ್ನು ಪರಿಗಣಿಸಿ ಅವರ ಧರ್ಮ ಪತ್ನಿ ಮಂಗಲ ಅಂಗಡಿ‌ ಅವರಿಗೆ ಮತ ನೀಡಬೇಕು. ಬೆಳಗಾವಿ ಲೋಕಸಭೆಗೆ ಮೊದಲ‌ ಬಾರಿ ಮಹಿಳೆಗೆ ಬಿಜೆಪಿ ಟಿಕೆಟ್ ನೀಡಿದ್ದೇವೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು.

ಗೋಕಾಕ ಮತ್ತು ಅರಭಾವಿಯಲ್ಲಿಯೂ ಉತ್ತಮವಾದ ವಾತಾವರಣ ಇದೆ. ಅಲ್ಲಿಯೂ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರ ನಡೆಸುತ್ತಿದ್ದಾರೆ. ನಾನು ಕೂಡ ಪ್ರಚಾರಕ್ಕೆ ತೆರಳುತ್ತಿದ್ದೇ‌ನೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಪ್ರಚಾರಕ್ಕೆ ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಸೋಲಿನ ಭೀತಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಎರಡನೇ ಬಾರಿ ಬೆಳಗಾವಿಗೆ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ನಾನು ಬೇರೆ ಪಕ್ಷದ ಅಭ್ಯರ್ಥಿಯ ಬಗ್ಗೆ ಏನೂ ಮಾತನಾಡಲು ಹೋಗುವುದಿಲ್ಲ. ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಇದೆ. ನಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡುವುದು ಹಾಗೂ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ತಪ್ಪು ಕಲ್ಪನೆ ಮಾಡಿಕೊಂಡು ಏನೋನೋ ಟಿಕೆ ಮಾಡಿದರೆ ನಾನು ಉತ್ತರ ಕೊಡುವುದಿಲ್ಲ. ಅವರು ಸ್ವತಂತ್ರರಿದ್ದಾರೆ. ಏನೂ ಬೇಕಾದರೂ ಮಾತನಾಡಬಹುದು ಎಂದು ತಮ್ಮದೆ ಶೈಲಿಯಲ್ಲಿ ಉತ್ತರಿಸಿದರು.

 

ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್,ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಬಿಜೆಪಿ ಮುಖಂಡರಾದ ರಾಜಕುಮಾರ ಟೋಪಣ್ಣವರ, ಆನಂದ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...