ಲಾರಿ ಚಾಲಕನ ಅಪಹರಣ ಪ್ರಕರಣ: ಮೂವರ ಬಂಧನ

0
3

ಲಾರಿ ಸಮೇತ ಚಾಲಕನನ್ನು ಅಪಹರಿಸಿಕೊಂಡು ಹೋಗಿದ್ದ ಮೂವರನ್ನು ಪೊಲೀಸರು ಬಂಧಿಸಿ, ಅವರಿಂದ ಅಪಹರಿಸಿಕೊಂಡು ಹೋಗಿದ್ದ ಲಾರಿ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ವಾಹನ ಸೇರಿದಂತೆ ಒಟ್ಟು ರು. 17.03.ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಕುಮಟಗಿ ತಾಂಡಾದ ಯುವರಾಜ ಉಮಲು ರಾಠೋಡ (30), ಸುರೇಶ ಉಮಲು ರಾಠೋಡ (34) ಹಾಗೂ ಮುತ್ತು ಉಮಲು ರಾಠೋಡ ಬಂಧಿತರು. ವಿಜಯಪುರದ ಕಲ್ಲಪ್ಪಾ ಬೆಳಗಲಿ ಎಂಬುವವರಿಗೆ ಸೇರಿದ್ದ ಲಾರಿಯನ್ನು ಬಳ್ಳಾರಿಯ ಫೈನಾನ್ಸ್ ಹರಾಜು ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಸಾತಾರಾದ? ಅರ್ಜುನ ಸುಪೇಕರ ಎಂಬುವವರು ಖರೀದಿ ಮಾಡಿದ್ದರು. ಆ ಲಾರಿಯನ್ನು ಏ.7 ರಂದು ಮಹಾರಾಷ್ಟ್ರ ಸಾತಾರ ಜಿಲ್ಲೆ ಖಟಾವ ತಾಲೂಕಿನ ಪವಾರವಾಡಿ (ವರ್ಧನಗಡ) ಗ್ರಾಮದ ರಮೇಶ ಪ್ರಲ್ಹಾದ ಪ್ರವಾರ ( ಲಾರಿ ಚಾಲಕ) ಬಳ್ಳಾರಿಯಿಂದ ಸಾತಾರದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದನು. ಈ ಲಾರಿಯ ಸಣ್ಣ ಪುಟ್ಟ ರಿಪೇರಿ ಕಾರ್ಯ ಇರುವುದರಿಂದ ಕೊಲ್ಹಾಪೂರದಲ್ಲಿ ಮಾಡಿಸಲು ನಿರ್ಧರಿಸಿ ಚಾಲಕ ರಾತ್ರಿಯಾಗಿದ್ದರಿಂದ ಅಪ್ಪಾಚಿವಾಡಿ ಪೆಟ್ರೋಲ್ ಬಂಕನಲ್ಲಿ ಲಾರಿ ನಿಲ್ಲಿಸಿ ಮಲಗಿಕೊಂಡಿದ್ದಾನೆ.
ನಂತರ ಮಾರನೆ ದಿನ ಏ.8ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಚಾಲಕ ಲಾರಿ ಚಲಾಯಿಸಿಕೊಂಡು ಕೊಲ್ಹಾಪುರದ ಕಡೆಗೆ ಹೋಗುತ್ತಿದ್ದ ವೇಳೆ ಸರ್ವಿಸ್ ರಸ್ತೆಯ ಮೇಲೆ ಇದ್ದ ಕ್ಯಾಂಟಿಗೆ ನಿಲ್ಲಿಸಿ ಉಪಹಾರ ಮಾಡಲು ನಿಂತ ಸಂದರ್ಭದಲ್ಲಿ ಸುಮಾರು 8/ಜನರ ತಂಡ ಸ್ಕಾರ್ಪಿಯೊ ವಾಹನದಲ್ಲಿ ಬಂದ ಲಾರಿ ಚಾಲಕ ರಮೇಗೆ ಮುತ್ತಿಗೆ ಹಾಕಿದ್ದಾರೆ. ನಂತರ ತಮ್ಮ ವಾಹನದಲ್ಲಿ ಹಾಕಿಕೊಂಡು ಲಾರಿ, ಮೊಬೈಲ್, ಪಾಕೆಟ್, ಎಟಿಎಂ ಹಾಗೂ ರು. 7500 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನದಲ್ಲಿ ಹಲ್ಲೆ ಮಾಡುತ್ತಾ ವಿಜಯಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆದರಿಸಿ ಎಟಿಎಂ ಪಿನ್ ಪಡೆದುಕೊಂಡು ಖಾತೆಯಲ್ಲಿದ್ದ 2500 ವನ್ನು ಪಡೆದುಕೊಂಡು, ಏ.9 ವರೆಗೆ ಆರೋಪಿಗಳು ತಮ್ಮ ಮನೆಯಲ್ಲಿ ಕೂಡಿಹಾಕಿದ್ದಾರೆ.
ಏ.9 ರಂದು ಲಾರಿ ಮಾಲೀಕ ಅರ್ಜುನ ಸೂಪೇಕರ ಹಾಗೂ ಇನ್ನೀತರರು ವಿಜಯಪುರಕ್ಕೆ ಆಗಮಿಸಿ ಆರೋಪಿಗಳ ವಶದಲ್ಲಿದ್ದ ಲಾರಿ ಚಾಲಕ ರಮೇಶನನ್ನು ಬಿಡಿಸಿಕೊಂಡು, ನಂತರ ಲಾರಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ಪಾಚಿವಾಡಿಯಿಂದ ವಿಜಯಪುರಕ್ಕೆ ತೆಗೆದುಕೊಂಡು ಹೋಗಿದ್ದರಿಂದ ಲಾರಿ ಚಾಲಕ ಹಾಗೂ ಮಾಲೀಕರು ನಿಪ್ಪಾಣಿಗೆ ಬಂದು ಈ ಘಟನೆ ಕುರಿತು ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತಂಡ ರಚಿಸಿದ ಪೊಲೀಸರು, ಮಂಗಳವಾರ ವಿಜಯಪುರ ಜಿಲ್ಲೆಯ ತೋರವಿ ಗ್ರಾಮದ ವ್ಯಾಪ್ತಿಯಲ್ಲಿ ಯುವರಾಜ ರಾಠೋಡ, ಸುರೇಶ್ ರಾಠೋಡ ಹಾಗೂ ಮುತ್ತು ರಾಠೋಡ ಎಂಬುವರನ್ನು ಬಂಧಿಸಿದ್ದಾರೆ. ನಂತರ ಅಪರಿಚಿಸಿದ ರು. 14 ಲಕ್ಷ ಮೌಲ್ಯದ ಲಾರಿ, ಕೃತ್ಯಕ್ಕೆ ಬಳಕೆ ಮಾಡಿದ್ದ ರು. 3 ಲಕ್ಷ ಮೌಲ್ಯದ ಸ್ಕಾರ್ಪಿಯೊ ಹಾಗೂ 3 ಸಾವಿರ ಮೌಲ್ಯದ ಮೊಬೈಲ್ ಸೇರಿದಂತೆ ಒಟ್ಟು ರು
17.03 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿಎಸ್‌ಪಿ ಮನೋಜಕುಮಾರ ನಾಯಕ ನೇತೃತ್ವದಲ್ಲಿ ನಿಪ್ಪಾಣಿ ಸಿಪಿಐ ಸಂತೋಷ ಸತ್ಯನಾಯಕ, ನಿಪ್ಪಾಣಿ ಗ್ರಾಮೀಣ ಠಾಣೆಯ ಪಿಎಸ್‌ಐ ಬಿ.ಎಸ್.ತಳವಾರ, ಎಎಸ್‌ಐ ಎಸ್.ಎ.ತೋಲಗಿ, ಸಿಬ್ಬಂದಿ ಪ್ರಕಾಶ ಸಾರವಾಡ, ಲಕ್ಷ್ಮಣ ಕೋಚರಿ, ಶ್ರೀಶೈಲ ಗಳತಗಿ, ಗೋಪಾಲ ಬಡಿಗೇರ, ಶಿವಾನಂದ ಸಾರವಾಡ, ಸಂಜಯ ಕಾಡಗೌಡರ, ಯಲ್ಲಪ್ಪಾ ಕರೆನ್ನವರ, ಪ್ರಶಾಂತ ಕುದರಿ, ಸಿದ್ಧಾರೋಡ ಖೋತ ಹಾಗೂ ಸುದರ್ಶನ ಖೋತ ಸೇರಿದಂತೆ ಇನ್ನೀತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...