ಕೋವಿಡ್ ನಿಯಮಗಳನ್ನು ಪಾಲಿಸಿ : ಡಾ. ತೋಂಟದ ಶ್ರೀಗಳು

0
12

ಬೆಳಗಾವಿ
ದೇಶದುದ್ದಕ್ಕೂ ಕೋವಿಡ್-19ರ ಎರಡನೆಯ ಅಲೆ ಪ್ರಾರಂಭವಾಗಿದ್ದು, ಅದು ಅತಿವೇಗದಿಂದ ಹರಡುತ್ತಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ ಸ್ವಚ್ಛವಾದ ಮತ್ತು ತೊಳೆದ ಮಾಸ್ಕ ಧರಿಸುವುದು, ಪರಸ್ಪರ ವ್ಯಕ್ತಿಗತವಾದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಆರೋಗ್ಯದ ನಿಯಮಗಳನ್ನು ಪಾಲಿಸುವುದು ಅತ್ಯಂತ ಆವಶ್ಯಕವಾಗಿದೆ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದ ಸತತ ಸಂಶೋಧನೆಯ ಫಲವಾಗಿ ಕೋವ್ಯಾಕ್ಷಿನ್ ಮತ್ತು ಕೋವಿಶೀಲ್ಡ ಎಂಬ ಎರಡು ರೀತಿಯ ಲಸಿಕೆಗಳನ್ನು ಬಿಡುಗಡೆಗೊಳಿಸಲಾಗಿದ್ದು, ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಮತ್ತು ಮನೆಮದ್ದನ್ನು ನಿಯಮಿತವಾಗಿ ಸೇವಿಸಬೇಕು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮದ್ಯಪಾನ, ಧೂಮ್ರಪಾನ ಮುಂತಾದ ವ್ಯಸನಗಳಿಂದ ದೂರವಿರಬೇಕು. ಸದಾ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಆಗಾಗ್ಗೆ ಸ್ಯಾನಿಟೈಜರ್ ಅಥವಾ ಸಾಬೂನಿನಿಂದ ಕೈಕಾಲು-ಮುಖ ಸ್ವಚ್ಛವಾಗಿ ತೊಳೆದುಕೊಳ್ಳುತ್ತಿರಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಹೋಗಬಾರದು. ಈ ರೀತಿ ಎಲ್ಲರೂ ಕಾಳಜಿ ವಹಿಸಿದರೆ ಕೋವಿಡ್-19ನ್ನು ನಿಯಂತ್ರಿಸಬಹುದು. ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಇಲ್ಲದಿದ್ದರೆ ಆಸ್ಪತ್ರೆಯ ಹಾಸಿಗೆಗಳನ್ನು ಆಕ್ರಮಿಸಿಕೊಳ್ಳುವುದು ಬೇಡ. ಹೆಚ್ಚು ತೊಂದರೆ ಇರುವವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಅನಾವಶ್ಯಕವಾಗಿ ಎಲ್ಲರೂ ಭಯದಿಂದ ಆಸ್ಪತ್ರೆಗಳತ್ತ ಮುಖ ಮಾಡಿದರೆ ಆಸ್ಪತ್ರೆಯಲ್ಲಿ ಹಾಸಿಗೆ, ಆಮ್ಲಜನಕ (ಆಕ್ಸಿಜನ್), ಜೀವರಕ್ಷಕ ಔಷಧಿ ಮುಂತಾದವುಗಳ ಕೊರತೆಯುಂಟಾಗಿ ಗಂಭೀರ ಸಮಸ್ಯೆ ತಲೆದೋರಬಹುದು. ಆದ್ದರಿಂದ, ಸಧ್ಯದ ತುರ್ತುಪರಿಸ್ಥಿತಿಯಲ್ಲಿ ಸಂಯಮದಿAದ ಮತ್ತು ಜನಪರ ಕಾಳಜಿಯಿಂದ ವರ್ತಿಸುವುದು ಅತ್ಯವಶ್ಯವಾಗಿದೆ. ಬಂಧುಗಳೆ! ಯಾವುದಕ್ಕೂ ಭಯಬೇಡ. ನಾವೆಲ್ಲರೂ ಸದಾ ಜಾಗ್ರತರಾಗಿರುವ ಮೂಲಕ ಕರೋನಾ ಮಹಾಮಾರಿಯನ್ನು ಮೆಟ್ಟಿ ನಿಲ್ಲೋಣ, ಕರೋನಾ ಯೋಧರಾಗಿ ನಮ್ಮ ದೇಶ ಮತ್ತು ದೇಶವಾಸಿಗಳನ್ನು ರಕ್ಷಿಸೋಣ ಎಂದು ಅವರು ಜನತೆಯನ್ನು ಕೋರಿದ್ದಾರೆ.

loading...