ಕಾಳ ಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ: ಇಬ್ಬರ ಬಂಧನ

0
40

ಕಾಳ ಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ: ಇಬ್ಬರ ಬಂಧನ

ಬೆಳಗಾವಿ

ಕೊರೊನಾ ರೋಗಿಗೆ ನೀಡುವ ರೆಮ್‌ಡಿಸಿವರ್ ಔಷಧವನ್ನು ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯ ಇಬ್ಬರು ಸ್ಟಾಫ್ ನರ್ಸ್‌ಗಳನ್ನು ಬೆಳಗಾವಿ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿ, ಅವರಿಂದ ರು.11,600 ಮೌಲ್ಯದ 3 ಔಷಧಿ ಬಾಟಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ರಾಮಪೂರ ಗ್ರಾಮದ ಮಂಜುನಾಥ ದುಂಡಪ್ಪ ದಾನವಾಡಕರ (25) ಸದ್ಯ ಬೆಳಗಾವಿ ಶಾಹೂನಗರ ಸಮರ್ಥ ಗಲ್ಲಿಯಲ್ಲಿ ವಾಸವಾಗಿದ್ದಾನೆ. ಮತ್ತೋರ್ವ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಸಂಜೀವ್ ಚಂದ್ರಶೇಖರ ಮಾಳಗಿ (33) ಸದ್ಯ ಶಿವಾಜಿನಗರದಲ್ಲಿ ವಾಸವಾಗಿದ್ದು, ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸ್ಟಾಪ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಸ್ಪತ್ರೆಯಲ್ಲಿರುವ ರೆಮಡಿಸಿವರ್‌ನ ಔಷಧಿಯನ್ನು ತೆಗೆದುಕೊಂಡು ಮೂಲ ಬೆಲೆ ೩೪೦೦ ಇದ್ದು ಅದನ್ನು ಕಾಳ ಸಂತೆಯಲ್ಲಿ ೨೫ ರಿಂದ ೩೦ ಸಾವಿರಕ್ಕೆ ವ್ಯವಸ್ಥಿತವಾಗಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಖಾಕಿ ಬಲೆಗೆ ದಂಧೆಕೋರರು ಲಾಕ್ :
ರೆಮಡಿಸಿವರ್ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಸಾಮಾನ್ಯ ಜನರಂತೆ ದೂರವಾಣಿ ಮೂಲಕ ಆರೋಪಿಗಳಿಗೆ ಮಾತನಾಡಿ, ನಮ್ಮ ಕುಟುಂಬ ಸದಸ್ಯರಿಗೆ ರೆಮ್‌ಡಿಸಿವರ್ ಔಷಧಿ ಅವಶ್ಯವಿದ್ದು, ಔಷಧಿ ನೀಡಿದ್ದಲ್ಲಿ ತಾವು ಹೇಳಿದ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿಗಳು ಹಣವನ್ನು ಖಾತೆಗೆ ವರ್ಗಾವಣೆ ಮಾಡಿ, ನಂತರ ತಾವು ಹೇಳುವ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ಅವರು ತಿಳಿಸಿದಂತೆ ಹಣವನ್ನು ಖಾತೆಗೆ ವರ್ಗಾವಣೆ ಮಾಡಿ, ನಗರದ ಪ್ರಮುಖ ಹೊಟೇಲ್ ಮುಂಭಾಗದಲ್ಲಿ ಔಷಧಿ ನೀಡುವ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೆಮ್‌ಡಿಸಿವರ್ ಔಷಧಿ ಬಾಟಲ್‌ಗಳು, ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...