ಸೋಲಿಗೆ ನಾನೇ ಕಾರಣ: ವಾರ್ನರ್

0
15

ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತೊಂದು ಸೋಲನ್ನು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಹೈದರಾಬಾದ್ 7 ವಿಕೆಟ್‌ಗಳಿಂದ ಸೋಲು ಕಂಡಿದೆ. ಈ ಬಾರಿಯ ಐಪಿಎಲ್‌ನಲ್ಲಿ ಆರು ಪಂದ್ಯಗಳನ್ನು ಆಡಿದ ಹೈದರಾಬಾದ್‌ಗೆ ಇದು ಐದನೇ ಸೋಲಾಗಿದೆ. ಈ ಸೋಲಿನ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ. ಈ ಸೋಲಿಗೆ ನಾನೇ ಕಾರಣ ಎಂದು ಸೋಲಿನ ಹೊಣೆಯನ್ನು ವಾರ್ನರ್ ಹೊತ್ತುಕೊಂಡಿದ್ದಾರೆ. ತನ್ನ ನಿಧಾನಗತಿಯ ಆಟದಿಂದಾಗಿ ತಂಡ ಸೋಲು ಕಾಣಬೇಕಾಯಿತು ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಪರವಾಗಿ ವಾರ್ನರ್ ಹಾಗೂ ಮನೀಶ್ ಪಾಂಡೆ ಅರ್ಧ ಶತಕವನ್ನು ಬಾರಿಸಿದರು. ಇದರಲ್ಲಿ ಡೇವಿಡ್ ವಾರ್ನರ್ 55 ಎಸೆತಗಳನ್ನು ಎದುರಿಸಿ 57 ರನ್‌ ಬಾರಿಸಿದರು. ಕೇವಲ 103.64ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು ವಾರ್ನರ್. “ನಾನು ಬ್ಯಾಟಿಂಗ್ ಮಾಡಿದ ರೀತಿಯ ಕಾರಣಕ್ಕೆ ಈ ಸೋಲಿನ ಎಲ್ಲಾ ಜವಾಬ್ಧಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ನನ್ನ ಇನ್ನಿಂಗ್ಸ್ ನಿಜಕ್ಕೂ ನಿಧಾನಗತಿಯದ್ದಾಗಿತ್ತು. ಫಿಲ್ಡರ್‌ಗಳು ಇದ್ದ ಕಡೆಗೆ ನನ್ನ ಹೊಡೆತಗಳು ಹೋಗುತ್ತಿದ್ದವು. ಹೀಗಾಗಿ ನಾನು ಸಾಕಷ್ಟು ಹತಾಶನಾದೆ” ಎಂದು ವಾರ್ನರ್ ಹೇಳಿದರು. ಈ ಸಂದರ್ಭದಲ್ಲಿ ಮನೀಶ್ ಪಾಂಡೆ ಬ್ಯಾಟಿಂಗ್ ಶೈಲಿಗೆ ವಾರ್ನರ್ ಮೆಚ್ಚುಗೆ ಸೂಚಿಸಿದರು.

loading...