ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ಡೌನ್ ಇಂದಿನಿಂದ ಜಾರಿಗೆ ಬರಲಿದೆ:ಹೆಚ್.ಡಿ.ಕುಮಾರಸ್ವಾಮಿ

0
15

ಬೆಂಗಳೂರು:-ಲಾಕ್ಡೌನ್ ಅಲ್ಲದ ಕಠಿಣ ಲಾಕ್ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ಡೌನ್ ಇಂದಿನಿಂದ ಜಾರಿಗೆ ಬರಲಿದೆ ಎಂದು ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ಟೀಕಿಸಿದ್ದಾರೆ.
ಜನಸಂಚಾರ ತಡೆಯುವುದೇ ಲಾಕ್ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ಡೌನ್ ಆಗಿತ್ತು.ಲಾಕ್ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು, ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ.ಲಾಕ್ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಃಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನನ್ನ ನಿಲುವು, ಸಲಹೆ. ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕಿತ್ತು ಮತ್ತು ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ.

loading...