370 ವಿಧಿ ರದ್ಧತಿ ಪ್ರಶ್ನಿಸಿ  ಸುಪ್ರೀಂಕೋರ್ಟ್ ಗೆ  ಆರ್ಜಿ ಸಲ್ಲಿಸಿದ ಕಾಶ್ಮೀರ ನಾಯಕ ಸಜ್ಜಾದ್ ಲೋನೆ

0
3

ನವದೆಹಲಿ- ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಕಾಶ್ಮೀರ ನಾಯಕ ಹಾಗೂ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ  ಸಜ್ಜಾದ್ ಲೋನೆ  ಶುಕ್ರವಾರ ಸುಪ್ರೀಂ ಕೋರ್ಟ್ ಗೆ  ಆರ್ಜಿ ಸಲ್ಲಿಸಿದ್ದಾರೆ.
ಸಂವಿಧಾನದ ವಿಧಿ 370 ಅನ್ನು  ರದ್ದುಪಡಿಸಿರುವುದು ಹಾಗೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಸ್ತರಿಸಿರುವುದು  ಸಂವಿಧಾನ ಬಾಹಿರ, ಹಾಗಾಗಿ ಕೇಂದ್ರ ಸರ್ಕಾರದ ಈ ಕ್ರಮವನ್ನು ರದ್ದುಪಡಿಸಬೇಕೆಂದು  ಸಜ್ಜಾದ್ ಲೋನೆ ತಮ್ಮ ಆರ್ಜಿಯಲ್ಲಿ  ಮನವಿ ಮಾಡಿದ್ದಾರೆ.
ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ  370 ವಿಧಿಯಡಿ  ಕಲ್ಪಿಸಲಾಗಿದ್ದ ವಿಶೇಷಾಧಿಕಾರವನ್ನು ರದ್ದುಪಡಿಸಿ ಆಗಸ್ಟ್ 5 ರಂದು ರಾಷ್ಟ್ರಪತಿ ಹೊರಡಿಸಿರುವ ಆದೇಶವನ್ನು  ಪ್ರಶ್ನಿಸಿ  ಕಳೆದ ಆಗಸ್ಟ್ 10 ರಂದು  ನ್ಯಾಷನಲ್ ಕಾನ್ಫರೆನ್ಸ್  ಸಂಸದರಾದ   ಮಹಮ್ಮದ್ ಅಕ್ಬರ್ ಲೋನೆ ಹಾಗೂ ಹಸನೈನ್  ಮಸೂದ್  ಸುಪ್ರೀಂ ಕೋರ್ಟ್ ಗೆ ಆರ್ಜಿ ಸಲ್ಲಿಸಿದ್ದರು.  ರಾಷ್ಟ್ರಪತಿ ಆದೇಶ ಅಕ್ರಮ ಹಾಗೂ ಸಂವಿಧಾನ ಬಾಹಿರ ಎಂದು ಘೋಷಿಸಬೇಕೆಂದು  ಅವರು ತಮ್ಮ ಆರ್ಜಿಯಲ್ಲಿ  ಮನವಿ ಮಾಡಿದ್ದರು.
ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ   ವಿಭಜಿಸುವ  ಜಮ್ಮು ಕಾಶ್ಮೀರ ಪುನರ್ವ್ಯವಸ್ಥೆ ಕಾಯ್ದೆ 2019 ಅನ್ನು  ಪ್ರಶ್ನಿಸಿರುವ ಆರ್ಜಿದಾರರು  ಈ ಕ್ರಮವನ್ನೂ  ಸಂವಿಧಾನಬಾಹಿರ, ಅಸಿಂಧು  ಎಂದು ಘೋಷಿಸಿ ನಿಷ್ಕ್ರಿಯಗೊಳಿಸಬೇಕು ಎಂದು ಕೋರಿದ್ದಾರೆ.

loading...