ಮಕ್ಕಳು ತಪ್ಪು ಮಾಡಿದಾಗ ಪಾಲಕರು ತಿದ್ದಿ ಬುದ್ದಿ ಹೇಳಿ: ಶಿವಯ್ಯ ಸ್ವಾಮೀಜಿ

0
47

Shivayyaswamiಬೀಳಗಿ,18- ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಜಾತಿ ಮತ್ತು ಪಕ್ಷ ಬೇದವನ್ನು  ಮರೆತು ಜನಪ್ರತಿನಿಧಿಗಳು ಕಾರ್ಯನಿರ್ವಹಿಸಿದಾಗ ಗ್ರಾಮಗಳು ಅಭಿವೃದ್ದಿಯಾಗಲು ಸಾಧ್ಯವೆಂದು ಬಬಲಾದಿ-ಚಮಕೇರಿಯ ಗುರು ಚಕ್ರವರ್ತಿ ಶ್ರೀ ಶಿವಯ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಕಾತರಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ  ಗ್ರಾಮ ಪಂಚಾಯತ ಕಟ್ಟಡದ ಉದ್ಘಾಟನಾ  ಸಮಾರಂಭ ಹಾಗೂ ಶ್ರೀಮತಿ ದೊಡ್ಡವ್ವ  ಬ ಅಂಗಡಿ ಸರಕಾರಿ ಪ್ರೌಢ ಶಾಲೆಯ  ಭೂಮಿ ಪೂಜೆ ಮತ್ತು ಸಂಸದರ  ಪ್ರದೇಶಾಭಿವೃದ್ದಿ ನಿಧಿಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಸಂಸ್ಕಾರವಂತರಾಗಿ ಧರ್ಮ, ನ್ಯಾಯ, ನೀತಿ, ರೀತಿ ಹಾಗೂ ಶಾಂತಿಯನ್ನು ಅಳವಡಿಸಿಕೊಂಡು ಗ್ರಾಮ ಪಂಚಾಯತ ಸದಸ್ಯರು ಕಾರ್ಯನಿರ್ವಹಿಸಿದಾಗ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಇಂದು ಎಲ್ಲ ರಂಗಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪ್ರಾಮಾಣಿಕತೆ, ಸಂಸ್ಕಾರದ ಕೊರತೆಯೇ ಭಯಕ್ಕೆ ಮೂಲವಾಗಿದೆ. ಶುದ್ಧವಾದ ನಡತೆ ಹೊಂದಿದ್ದರೆ ಭಯದ ನೆರಳು ನಮ್ಮ ಹತ್ತಿರ ಸುಳಿಯದು. ಮಕ್ಕಳು ತಪ್ಪು ಮಾಡಿದಾಗ ಪಾಲಕರು ತಿದ್ದಿ ಬುದ್ದಿ ಹೇಳಬೇಕು. ಇದು ಬಿಟ್ಟು ಅಲ್ಲದ ಕೆಲಸ ಮಾಡಿದಾಗ ಪ್ರೌತ್ಸಾಹ ನೀಡಿದರೆ ಅಂಥ ಮಕ್ಕಳು ಲೋಕ ಕಂಟಕರಾಗಿ ಪರಿಣಮಿಸುವರು. ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಅಂಗಡಿ ಮನೆತನದವರು 2 ಎಕರೆ ಜಮೀನು ದಾನವಾಗಿ ನೀಡಿದ್ದು ಅಭಿನಂದನಿಯ ಕಾರ್ಯವಾಗಿದೆ ಎಂದು ಹೇಳಿದರು. ಸಚಿವ ಮುರುಗೇಶ ನಿರಾಣಿ ನೂತನ ಪ್ರೌಢ ಶಾಲೆಯ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ಗ್ರಾಮಕ್ಕೆ ನೂತನ ಪ್ರೌಢ ಶಾಲೆಯನ್ನು ಮಂಜೂರಿಗೊಳಿಸಲಾಗಿದೆ. ಸುಸಜ್ಜಿತವಾದ ಕಟ್ಟಡಕ್ಕೆ ಬೇಕಾದ ಅಗತ್ಯ ಅನುದಾನವನ್ನು ವದಗಿಸುವದಾಗಿ ಹೇಳಿದರಲ್ಲದೇ, ಪ್ರೌಢ ಶಾಲೆಗೆ ಶತಾಯುಷಿ ಶ್ರೀಮತಿ ದೊಡ್ಡವ್ವ ಬ ಅಂಗಡಿಯವರು ಜಮೀನು ದಾನ ಮಾಡಿದ್ದಕ್ಕೆ ಸರಕಾರದ ಪರವಾಗಿ ಅಭಿನಂದಿಸಿದರು.

22 ಕೋಟಿ ರೂ.ಗಳಲ್ಲಿ  ಕಾತರಕಿ-ಕಲಾದಗಿ ಮಧ್ಯೆ ಬ್ಯಾರೇಜ್ ಕಮ್  ಬ್ರಿಜ್ ಕಾಮಗಾರಿ ಪ್ರಾರಂಭವಾಗಿದ್ದು, ಗುತ್ತಿಗೆದಾರ ಮಂದಗತಿಯಲ್ಲಿ ಕೆಲಸ ನಡೆಸಿದ್ದರಿಂದ ತಡವಾಗಿದೆ. ಬರುವ ದಿನಗಳಲ್ಲಿ ಕೆಲಸವನ್ನು ತ್ವರಿತಗತಿಯಲ್ಲಿ ನಡೆಸಿ ಲೋಕಾರ್ಪಣೆ ಮಾಡಲಾಗುತ್ತದೆ. ಹೆರಕಲ್ ಹತ್ತಿರವೂ ಸಹ 62 ಕೋಟಿ ರೂ.ಗಳಲ್ಲಿ ಬ್ಯಾರೆಜ್ ಕಮ್ ಬ್ರಿಜ್ ನಿರ್ಮಿಸಲಾಗುತ್ತದೆ. ಈಗಾಗಲೆ ಮಂಜೂರಿಯಾಗಿದ್ದು, ಇಷ್ಟರಲ್ಲೆ ಸುಮಾರು 50 ಸಾವಿರ ಜನರನ್ನು ಸೇರಿಸಿ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ನೆರವೇರಿಸಲಾಗುವದೆಂದು ಹೇಳಿದರು.

ತಾಲೂಕಿನಲ್ಲಿ ಬಸವ  ವಸತಿ ಯೋಜನೆ ಅಡಿಯಲ್ಲಿ 11 ಸಾವಿರ ಮನೆಗಳನ್ನು  ನಿರ್ಮಿಸಲು ಈಗಾಗಲೇ ಫಲಾನುಭವಿಗಳಿಗೆ  ಹಕ್ಕು ಪತ್ರಗಳನ್ನು ವಿತರಿಸಲಾಗಿದೆ.  ಸ್ಪಿಂಕ್ಲರ ಮೂಲಕ ಗುಡ್ಡದ ದಂಡೆಗುಂಟ ಇರುವ ಒಣಬೇಸಾಯ ಜಮೀನನ್ನು ನೀರಾವರಿಗೆ ಅಳವಡಿಸುವದು ಮತ್ತು ಮತಕ್ಷೇತ್ರದಲ್ಲಿ ಬರುವ ಎಲ್ಲ ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್  ವಿರೋಧ ಪಕ್ಷದ ನಾಯಕ ಎಸ್. ಆರ್.  ಪಾಟೀಲ ನೂತನ ಗ್ರಾ ಪಂ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ದೇವರೆಂದು ಭಾವಿಸಿ ಅತ್ಯಂತ ಪ್ರಾಮಾಣಿಕವಾಗಿ, ಶ್ರದ್ದೆಯಿಂದ ಗ್ರಾ ಪಂ ಸದಸ್ಯರು ಕಾರ್ಯನಿರ್ವಹಿಸಿದಾಗ ಸದಸ್ಯರಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿ, ಭೂ ದಾನ ಮಾಡಿದ ಅಂಗಡಿ ಕುಟುಂಬವನ್ನು ಅಭಿನಂದಿಸಿದರು.

ಕಾರ್ಯಕ್ರಮವನ್ನು ಜ್ಯೌತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಕಲಾದಗಿಯ ಪಂಚಗ್ರಹ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ದಾನಗಳಲ್ಲಿ ಶಿಕ್ಷಣಕ್ಕಾಗಿ ದಾನ ಮಾಡುವುದು ಅತಿ ಶ್ರೇಷ್ಠ ಕಾರ್ಯವಾಗಿದೆ ಎಂದು ಹೇಳುತ್ತಾ ಕೆ.ಎಲ್.ಇ. ಸಂಸ್ಥೆಗೆ ಲಿಂಗರಾಜ ದೇಸಾಯಿ ಭೂ ದಾನ ಮಾಡಿದ್ದರಿಂದ ಆ ಸಂಸ್ಥೆ ಇಂದು ಬೆಳೆದು ಹೆಮ್ಮರವಾಗಿದೆ ಎಂದು ಸ್ಮರಿಸಿದರು. ಅಲ್ಲದೇ ಶಿಕ್ಷಕರು  ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಕೊಡಬೇಕೆಂದು ಕರೆ ಕೊಟ್ಟರು. ಸನ್ಮಾನ:  ಭೂ ದಾನಿ ಶತಾಯುಷಿ ಶ್ರೀಮತಿ ದೊಡ್ಡವ್ವ ಬ ಅಂಗಡಿ, ಜಿಲ್ಲಾ ರಾಜ್ಯೌತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಡಿ. ಎಂ. ಸಾಹುಕಾರ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಚ್. ಟಿ. ಸಣಗೌಡರ ಇವರನ್ನು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಗ್ರಾ ಪಂ ಅಧ್ಯಕ್ಷ ಎಚ್. ಎಸ್. ನಿಂಗೊಳ್ಳಿ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಜಿ. ಪಂ. ಅಧ್ಯಕ್ಷೆ ಶ್ರೀಮತಿ ಶಾಂತವ್ವ ಭೀ. ಭೂಷಣ್ಣವರ,  ಜಿ. ಪಂ. ಉಪಾಧ್ಯಕ್ಷ ಕೃಷ್ಣಾ ಓಗೆಣ್ಣವರ, ತಾ. ಪಂ. ಅಧ್ಯಕ್ಷ ಯಲ್ಲಪ್ಪ ಯ ಹಳ್ಳೂರ, ಎ.ಪಿ.ಎಂ.ಸಿ. ಅಧ್ಯಕ್ಷ ಕೆ. ವಿ. ಪಾಟೀಲ, ಜಿ. ಪಂ. ಸದಸ್ಯೆ ಶ್ರೀಮತಿ ಸುಧಾ ಚಿ ಸೊರಗಾವಿ, ತಾ. ಪಂ. ಸದಸ್ಯೆ ಶ್ರೀಮತಿ ರಾಜೇಶ್ವರಿ ಯ ಹುದ್ದಾರ, ಮಾಜಿ ಶಾಸಕ ಸಿ ಆರ್ ಸೊರಗಾವಿ, ಜಿ ಪಂ ಸದಸ್ಯರಾದ ಹೂವಪ್ಪ ರಾಠೋಡ, ಎಚ್. ಆರ್. ನಿರಾಣಿ, ಸಿದ್ದು ದಿವಾಣ, ತಹಶೀಲ್ದಾರ ಎಲ್. ಬಿ. ಕುಲಕರ್ಣಿ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸಿ. ಕಮತ, ಬಿ. ಕೆ. ನಂದನೂರ, ಕ್ಷೇತ್ರಶಿಕ್ಷಣಾಧಿಕಾರಿ ಎಂ. ಜಿ. ದಾಸರ, ತಾ. ಪಂ. ಉಪಾಧ್ಯಕ್ಷೆ ಇಂದ್ರವ್ವ ಬಿರಾದಾರ, ಸದಸ್ಯೆ ಭಾರತಿ ಮುತ್ತಲಗೇರಿ, ಗ್ರಾ ಪಂ ಸದಸ್ಯರಾದ ಎಸ್ ಎಸ್ ಕೆರಕಲಮಟ್ಟಿ, ಎಂ ಎಂ ಶಂಭೋಜಿ, ಎಸ್. ಬಿ. ಭೂಷಣ್ಣವರ ಸೇರಿದಂತೆ ಮತ್ತಿತರರು ವೇದಿಕೆ ಮೇಲಿದ್ದರು.

ಹಂಪಣ್ಣ ಅಂಗಡಿ  ಮತ್ತು ಬಸು ಕೆರಕಲಮಟ್ಟಿ ನಿರೂಪಿಸಿದರು. ಪರಶುರಾಮ ಮೇಟಿ ಸ್ವಾಗತಿಸಿದರು. ಆರ್.  ಸಿ. ವಡವಾಣಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here