ಸಾಲ ಮನ್ನಾ ಮಾಡುವುದು ಸರ್ಕಾರಗಳಿಂದ ರೈತರ ಕಣ್ಣೊರೆಸುವ ತಂತ್ರ : ಶಾಸಕ ಬಿ.ಕೆ.ಸಂಗಮೇಶ್ವರ

0
53

ಭದ್ರಾವತಿ: ರೈತರ ಸಾಲ ಮನ್ನಾ ಮಾಡುತ್ತೇವೆಂದು ಸರ್ಕಾರಗಳು ರೈತರ ಕಣ್ಣೊರೆಸುವ ತಂತ್ರ ಮಾಡುತ್ತಿವೆ. ರೈತರ ಸಾಲಮನ್ನಾ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ದೇಶದ ಬೆನ್ನೆಲುಬು ರೈತರ ಎಂದು ಹೇಳುವ ಬದಲು ರೈತರ ಹಿತ ಕಾಯಲು ಅವರ ಜೀವನ ಭದ್ರತೆಗಾಗಿ ಕ್ರಿಯಾ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದರು.

ಅವರು ತಾಲ್ಲೂಕು ಕೃಷಿ ಮಾಹಿತಿ ಆಂದೋಲನ 2012-13 ಕಾರ್ಯಕ್ರಮ ಉದ್ಘಾಟಿಸಿ, ಕೃಷಿ ಪಂಡಿತ ಪ್ರಶಸ್ತಿ ವಿಜೇತ ಪ್ರಗತಿಪರ ರೈತ ಹೊಳೆಬೆನವಳ್ಳಿಯ ಕುಮಾರನಾಯ್ಡು ರವರನ್ನು ಸನ್ಮಾನಿಸಿ ಮಾತನಾಡಿದರು.

ಇದುವರೆಗೂ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಯಾವ ರೈತರ ಹೆಸರೂ  ಇಲ್ಲ. ಕೇವಲ ಕೈಗಾರಿಕೆ ಹಾಗೂ ಉಧ್ಯಮಿಗಳ ಹೆಸರು ಮಾತ್ರ ಇರುತ್ತಿದೆ. ರೈತರು ಬಡವರಾಗಿಯೇ ಉಳಿದಿದ್ದಾರೆ. ಅರೆ ಮಲೆನಾಡಿನಲ್ಲಿ ಕಡಿಮೆ ಖರ್ಚಿನಿಂದ ಹೆಚ್ಚು ಆದಾಯ ತರುವ ಬೆಳೆಗಳನ್ನು ಬೆಳೆಯಲು ಕೃಷಿ ಅಧಿಕಾರಿಗಳಿಂದ ಸೂಕ್ತ ಮಾಹಿತಿ, ಸಲಹೆ ಪಡೆದು ಅಭಿವೃದ್ದಿ ಹೊಂದಬೇಕು. ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜಸಂಖ್ಯೆಗೆ ಆಹಾರ ಭದ್ರತೆ ನೀಡಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆಯನ್ನು ಪಡೆಯುವುದು ಅತ್ಯವಶ್ಯಕವಾಗಿದೆಯೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ವೈ.ಡಿ.ಉಷಾ ಸತೀಶ್ಗೌಡ ಸಾವಯವ ಕೃಷಿ ಬಗ್ಗೆ ತಜ್ಞರ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ಕೈಗಾರಿಕೆಗಳು ಇಲ್ಲದಿದ್ದಲ್ಲಿ ಜೀವನ ದುಸ್ತರವಲ್ಲ. ಆದರೆ ರೈತನಿಲ್ಲದೆ ಜೀವನ ಕಷ್ಠಸಾಧ್ಯ. ಪ್ರಸ್ತುತ ರೈತರ ಪರಿಸ್ಥಿತಿಯನ್ನು ಮನಗಂಡು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ತಾಂತ್ರಿಕ ಮಾಹಿತಿಗಳನ್ನು, ಯೋಜನೆಗಳ ವಿವರಗಳನ್ನು ಏಕಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಾಮೂಹಿಕ ಜಾಗೃತಿ ಕಾರ್ಯಕ್ರಮವಾಗಿ ಕೃಷಿ ಮಾಹಿತಿ ಆಂದೋಲನ ಸಹಕಾರಿಯಾಗಲಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

            ಇದೇ ಸಂದರ್ಭದಲ್ಲಿ ಸಮಾನ ಮನಸ್ಕವುಳ್ಳ ತಾಲ್ಲೂಕಿನ 6 ಕೃಷಿ ಸಂಘಗಳಿಗೆ ತಲಾ 20 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು. ಜಂಟಿ ಕೃಷಿ ನಿರ್ದೇಶಕ ಡಾ|| ಶಿವಮೂರ್ತಪ್ಪ ಪ್ರಾಸ್ತಾವಿಕ ನುಡಿದರು. ತಾ.ಪಂ ಅಧ್ಯಕ್ಷೆ ಜಮರುದ್ಬಾನು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗೌರಮ್ಮ, ಮಾಜಿ ಅಧ್ಯಕ್ಷ ಆರ್.ಹಾಲಪ್ಪ, ಸದಸ್ಯರುಗಳಾದ ದೇವೇಂದ್ರನಾಯಕ್, ಶ್ರೀನಿವಾಸ್, ಭುವನೇಶ್ವರಿ, ಸಾಕಮ್ಮ, ಮುಖಂಡ ತಳ್ಳಿಕಟ್ಟೆ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು. ಬಸವರಾಜಪ್ಪ ಸ್ವಾಗತಿಸಿ, ಕಾಶೀನಾಥ್ ವಂದಿಸಿದರು.

loading...

LEAVE A REPLY

Please enter your comment!
Please enter your name here