ಮೈತ್ರಿಗಾಗಿ ಕಸರತ್ತು

0
43

 ನಮ್ಮ ಭಾಷೆಯಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು  ಎಂಬ ಗಾದೆ ಮಾತು  ಇದೆ. ಆ ಮಾತಿನಂತೆ ಕಳೆದ ತಿಂಗಳು ರಾಜ್ಯದಲ್ಲಿ ನಡೆದ ವಿಧಾನ ಸಭೆಯ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷ ಹಾಗೂ ಕರ್ನಾಟಕ ಜನತಾ ಪಕ್ಷ ನಾಯಕರಿಗೆ ಬುದ್ದಿ ಬಂದಂತೆ ಕಂಡು ಬರುತ್ತದೆ. ಈ ಎರಡೂ ಪಕ್ಷಗಳು ಚುನಾವಣೆಯಲ್ಲಿ ಹೀನಾಯವಾದ ಸೋಲನ್ನು ಅನುಭವಿಸಿವೆ. ಕಳೆದ ಅವಧಿಯಲ್ಲಿ 120 ಸದಸ್ಯರನ್ನು ಹೊಂದಿ ಆಡಳಿತ ಪಕ್ಷವಾಗಿದ್ದ ಭಾರತೀಯ ಜನತಾ ಪಕ್ಷ ಈಗ ನಡೆದ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳಿಸಿ  ಪ್ರತಿ ಪಕ್ಷದ ಪಟ್ಟ ಸಹ ಏರದೆ ಹೀನಾಯವಾಗಿ ಪರಾಭವಗೊಂಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಇಲ್ಲವೇ ಕಿಂಗ್ ಮೇಕರ್ ಆಗುವ ಕನಸಿನೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇವಲ ಆರು ಸ್ಥಾನ ಗಳಿಸಿ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯನ್ನು ಅನುಭವಿಸಿದ್ದಾರೆ. ಈ ಸೋಲಿಗೆ ಭಾರತೀಯ ಜನತಾ ಪಕ್ಷದ ಮೊದಲಿನ ಮತಗಳು ಈ ಎರಡೂ ಪಕ್ಷಗಳಲ್ಲಿ ಹರಿದು ಹಂಚಿ ಹೋಗಿರುವುದು ಕಾರಣವಾಗಿದೆ. ಆದ್ದರಿಂದ ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ಇದೇ ರೀತಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಇದೇ ರೀತಿಯ ಸೋಲನ್ನು ಅನುಭವಿಸಬೇಕಾಗುತ್ತದೆ ಎಂಬ ಅರಿವು ಎರಡೂ ಪಕ್ಷಗಳ ನಾಯಕರಲ್ಲಿ ಉಂಟಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆಯ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಪಕ್ಷಕ್ಕೆ  ತೀವ್ರ ಸ್ಪರ್ಧೆಯನ್ನು ನೀಡಬಹುದು ಎಂಬ ಆಸೆಯಿಂದ ಎರಡೂ ಪಕ್ಷದ ನಾಯಕರು ಈಗ ಒಂದಾಗುವ ಮಾತನ್ನು ಆಡತೊಡಗಿದ್ದಾರೆ. ಈಗಾಗಲೇ ರಾಜ್ಯ ಭಾಜಪ ಧುರೀಣ ಗೋಮಧುಸೂದನ ಅವರು ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದು ಯಡಿಯೂರಪ್ಪನವರನ್ನು ಹಾಗೂ ಶ್ರೀರಾಮಲು  ಅವರನ್ನು ಮರಳಿ ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಮಾಜಿ ಸಚಿವ ಉಮೇಶ ಕತ್ತಿ ಬೆಳಗಾವಿಯಲ್ಲಿ ಮಾತನಾಡಿ ನಮ್ಮ ಪಕ್ಷ ಮುಂದಿನ ವರ್ಷ ನಡೆಯುವ ಲೋಕಸಭೆಯ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಯಡಿಯೂರಪ್ಪ ಮತ್ತು ಶ್ರೀರಾಮಲು ನಮ್ಮ ಪಕ್ಷಕ್ಕೆ ಬರಬೇಕು ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಕೆಜೆಪಿ ಧುರೀಣ ಧನಂಜಯ ಕುಮಾರ ಅವರು ತಮ್ಮ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ದವಿದೆ ಎಂದು ಹೇಳಿದ್ದಾರೆ. ಆದರೆ ಪಕ್ಷಕ್ಕೆ ಮರಳುವುದನ್ನು ಹಾಗೂ ತಮ್ಮ ಪಕ್ಷವನ್ನು ಭಾಜಪದಲ್ಲಿ ವೀಲೀನಗೊಳಿಸುವುದನ್ನು ತಳ್ಳಿ ಹಾಕಿರುವ ಧನಂಜಯ ಕುಮಾರ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡು ಕೇವಲ ಮೈತ್ರಿ ಮಾಡಿಕೊಳ್ಳಲು ಮಾತ್ರ ತಮ್ಮ ಪಕ್ಷ ಸಿದ್ದವಿದೆ ಎಂದು ಧನಂಜಯ ಕುಮಾರ ಸ್ಪಷ್ಟ ಪಡಿಸಿದ್ದಾರೆ.

            ಈ ರೀತಿಯ ಚಿಂತನೆಗಳು ಎರಡೂ ಪಕ್ಷಗಳಲ್ಲಿ ನಡೆದಿದ್ದು ಒಟ್ಟಿನಲ್ಲಿ ಮುಂದಿನ ಲೋಕಸಭೆಯ ಚುನಾವಣೆ ಬರುವ ಮೊದಲು ನಮ್ಮ ರಾಜ್ಯದಲ್ಲಿ ಕೆಲವು ರಾಜಕೀಯ ಬದಲಾವಣೆಗಳು ನಡೆಯುವ ಸಾಧ್ಯತೆ ಇರುವುದನ್ನು ತಳ್ಳಿ ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ.

loading...

LEAVE A REPLY

Please enter your comment!
Please enter your name here